ಬೆಂಗಳೂರು:ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವಿಳಂಬವಾಗುತ್ತಿದೆ. ಪ್ರಮುಖ ಜಲಾಶಯಗಳ ನೀರಿನ ಮಟ್ಟ ಕುಸಿಯಲು ಆರಂಭಿಸಿದೆ. ಕಳೆದ ಮೂರು ವರ್ಷಗಳಿಂದ ಉತ್ತಮ ಮುಂಗಾರು ಕಂಡಿದ್ದ ಕರುನಾಡಿಗೆ ಈ ಬಾರಿ ಮಳೆಯ ಕೊರತೆಯ ಭೀತಿ ಇದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆ ಕುಂಠಿತವಾಗುವ ಆತಂಕ ಉಂಟಾಗಿದ್ದು, ಮುಂದೆ ಹೆಚ್ಚಿನ ವಿದ್ಯುತ್ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಉಚಿತ ವಿದ್ಯುತ್ ಗ್ಯಾರಂಟಿ ಹೊರೆಯ ಮಧ್ಯೆ ಈ ಬಾರಿ ರಾಜ್ಯ ಸರ್ಕಾರದ ಮೇಲೆ ವಿದ್ಯುತ್ ಕೊರತೆ, ಹೆಚ್ಚು ವಿದ್ಯುತ್ ಖರೀದಿ ಹೊರೆಯ ತೂಗುಗತ್ತಿಯೂ ನೇತಾಡುತ್ತಿದೆ.
ಈ ಬಾರಿ ರಾಜ್ಯದಲ್ಲಿ ಆರಂಭಿಕ ಪೂರ್ವ ಮುಂಗಾರಿನ ಕೊರತೆ ಎದುರಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಾಗುತ್ತಿದೆ. ಹೀಗಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿಯೇ ಇತ್ತು. ಆದರೆ, ಈ ಸಲ ಪೂರ್ವ ಮುಂಗಾರು ಮಳೆ ಕೈಕೊಟ್ಟಿದೆ. ಇತ್ತ ಮುಂಗಾರು ಮಳೆಯ ಆಗಮನವೂ ವಿಳಂಬವಾಗಿದೆ. ಇದರಿಂದ ಈಗಾಗಲೇ ಜಲಾಶಯಗಳ ನೀರಿನ ಮಟ್ಟ ಕುಸಿತ ಕಾಣುತ್ತಿದೆ.
ಪ್ರಸ್ತುತ ಮಳೆಯ ಕೊರತೆ ಎದುರಾಗುವ ಆತಂಕ ಕಂಡುಬರುತ್ತಿದ್ದು, ವಿದ್ಯುತ್ ಉತ್ಪಾದನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಗೋಚರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ ದುಪ್ಪಟ್ಟಾಗಿದೆ. ಸದ್ಯ ರಾಜ್ಯದ ವಿದ್ಯುತ್ ಬೇಡಿಕೆ 243 MU ಇದೆ. ಇತ್ತ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ ಕಾಣುತ್ತಿರುವ ಕಾರಣ ಜಲ ವಿದ್ಯುತ್ ಉತ್ಪಾದನಾ ಪ್ರಮಾಣ ಕಡಿಮೆಯಾಗುವ ಆತಂಕ ಸೃಷ್ಟಿಯಾಗಿದೆ. ಜಲ ವಿದ್ಯುತ್ ಘಟಕಗಳಿಂದ ಉತ್ಪಾದನೆ ಕಡಿಮೆಯಾದರೆ, ಕಲ್ಲಿದ್ದಲು ವಿದ್ಯುತ್ ಘಟಕಗಳನ್ನೇ ಹೆಚ್ಚಿಗೆ ನೆಚ್ಚಿಕೊಳ್ಳುವ ಅನಿವಾರ್ಯತೆ ಇದೆ. ಜೊತೆಗೆ ವಿದ್ಯುತ್ ಅಭಾವ ಸರಿದೂಗಿದಲು ವಿದ್ಯುತ್ ಖರೀದಿಯ ಅನಿವಾರ್ಯತೆಯೂ ಎದುರಾಗಿದೆ. ಅಷ್ಟಕ್ಕೂ ಉಚಿತ ವಿದ್ಯುತ್ ಗ್ಯಾರಂಟಿ ಮಧ್ಯೆ ಎಸ್ಕಾಂಗಳ ಮೇಲಿನ ವಿದ್ಯುತ್ ಖರೀದಿಯ ಹೊರೆ ಏನಿದೆ ಎಂಬ ವರದಿ ಇಲ್ಲಿದೆ.
ವಿದ್ಯುತ್ ಖರೀದಿ ಅನಿವಾರ್ಯತೆ:ಈ ಬಾರಿ ಮಳೆ ಕೈಕೊಟ್ಟರೆ ಹೆಚ್ಚಿನ ವಿದ್ಯುತ್ ಖರೀದಿ ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯ ಕೊರತೆ ರಾಜ್ಯ ಸರ್ಕಾರವನ್ನು ಕಂಗೆಡಿಸುವಂತೆ ಮಾಡಿದೆ. ಮುಂಗಾರು ಕೊರತೆ ಇದೇ ರೀತಿ ಮುಂದುವರಿದರೆ ರಾಜ್ಯದ ವಿದ್ಯುತ್ ಉತ್ಪಾದನೆ ಕುಂಠತವಾಗಲಿದ್ದು, ವಿದ್ಯುತ್ ಕೊರತೆ ಎದುರಾಗುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಕೊರತೆ ಸರಿದೂಗಿಸಲು ಹೆಚ್ಚಿನ ವಿದ್ಯುತ್ ಖರೀದಿ ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಮಾರಾಟ ಮಾಡುತ್ತಿತ್ತು. ಇತ್ತ ವಿದ್ಯುತ್ ಖರೀದಿಯತ್ತ ಹೆಚ್ಚಿನ ಅನಿವಾರ್ಯ ಬಂದೊದಗಿರಲಿಲ್ಲ.
ಇಂಧನ ಇಲಾಖೆ ನೀಡಿದ ಅಂಕಿಅಂಶದಂತೆ 2018-19ರಲ್ಲಿ ರಾಜ್ಯ ಸರ್ಕಾರ 394.17 ಕೋಟಿ ವೆಚ್ಚದಲ್ಲಿ 966.09 ಎಂ.ಯು. ವಿದ್ಯುತ್ ಖರೀದಿಸಿತ್ತು. 2019-20ರಲ್ಲಿ ಒಟ್ಟು ರಾಜ್ಯದಲ್ಲಿ ಎಥೇಚ್ಚ ವಿದ್ಯುತ್ ಇದ್ದ ಕಾರಣ ಖರೀದಿ ಮಾಡಿರಲಿಲ್ಲ. 1920-21ರಲ್ಲಿ ತಾತ್ಕಾಲಿಕ ವಿದ್ಯುತ್ ಕೊರತೆ ನೀಗಿಸಲು 4.83 ಎಂ.ಯು. ವಿದ್ಯುತ್ ಮಾತ್ರ ಖರೀದಿ ಮಾಡಿತ್ತು. 2022-23ರಲ್ಲಿ ಸುಮಾರು 600 ಎಂ.ಯುಗೂ ಹೆಚ್ಚು ವಿದ್ಯುತ್ ಖರೀದಿ ಮಾಡಲಾಗಿತ್ತು. 2023-24 ಸಾಲಿನಲ್ಲಿ ಈವರೆಗೆ ಎಸ್ಕಾಂಗಳು ಸುಮಾರು 311 ಎಂ.ಯು ವಿದ್ಯುತ್ ಖರೀದಿ ಮಾಡಿದೆ.