ಬೆಂಗಳೂರು :ನಗರದಲ್ಲಿ ದಿನವಿಡೀ ವ್ಯಾಪಕವಾಗಿ ತುಂತುರು ಮಳೆಯಾಗುತ್ತಿದೆ. ಕೆಲವು ಭಾಗದಲ್ಲಿ ಮೋಡಕವಿದ ವಾತಾವರಣವಿದೆ. ಉತ್ತರ ಒಳನಾಡಿನಲ್ಲಿಯೂ ಇಂದು ವ್ಯಾಪಕ ಮಳೆಯಾಗುತ್ತಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ತಜ್ಞ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.
ನೈರುತ್ಯ ಬಂಗಾಳ ಉಪಸಾಗರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಮಳೆ ವಾತಾವರಣವಿದೆ. ಕರಾವಳಿ ಜಿಲ್ಲೆಗಳಿಗೆ ಅಗಸ್ಟ್ 2ರವರೆಗೂ ಮಳೆ ಮುಂದುವರಿಯಲಿದೆ. ಉತ್ತರಕನ್ನಡ, ದ.ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಜುಲೈ 29,30 ಹಾಗೂ ಅಗಸ್ಟ್ 1ರಂದು ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದರೆ, ಜುಲೈ 31ರಂದು ಈ ಮೂರೂ ಜಿಲ್ಲೆಗಳಿಗೆ ಭಾರೀ ಅಥವಾ ಅತೀ ಮಳೆ ನಿರೀಕ್ಷಿಸಿರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.