ಬೆಂಗಳೂರು: ಪ್ಯಾಪುಲರ್ ಫೈನಾನ್ಸ್ ಕಂಪನಿ ವಿರುದ್ಧ ಕೇಳಿಬಂದಿರುವ ಹೂಡಿಕೆ ಹಣ ವಂಚನೆ ಪ್ರಕರಣದ ತನಿಖೆಯು ಸಿಐಡಿಗೆ ವರ್ಗಾವಣೆಯಾಗಿದೆ. ಈಗಾಗಲೇ ಪ್ರಕರಣ ಸಂಬಂಧ ಆರು ಮಂದಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಪ್ಯಾಪುಲರ್ ಫೈನಾನ್ಸ್ ಕಂಪನಿ ಬೆಂಗಳೂರು ವಿಭಾಗದ ಚೀಫ್ ಎಕ್ಸಿಕ್ಯೂಟಿವ್ ಥಾಮಸ್ ಡೇನಿಯಲ್, ಡೆಪ್ಯೂಟಿ ಸಿಇಓ ಪ್ರಭಾಸ್ ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ಕಂಪನಿಯು ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ನೂರಾರು ಜನರಿಂದ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿಕೊಂಡು ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು.
ಫೈನಾನ್ಸ್ ಕಂಪನಿ ಮತ್ತಿಕೆರೆ ಬಳಿಯ ಶಾಖೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ನೀಡುವುದಾಗಿ ನೂರಾರು ಜನರಿಂದ ಲಕ್ಷಾಂತರ ರೂಪಾಯಿ ಹಣ ಕಟ್ಟಿಸಿಕೊಳ್ಳಲಾಗಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬಡ್ಡಿ ಹಣ ಕೊಟ್ಟಿರಲಿಲ್ಲ. ಅಲ್ಲದೆ ಅಸಲು ಹಣವನ್ನೂ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಮೋಸ ಹೋದ ಹೂಡಿಕೆದಾರರು ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪಾಪ್ಯುಲರ್ ಫೈನಾನ್ಸ್ ಕಂಪನಿ ವಿರುದ್ಧ 50ಕ್ಕೂ ಹೆಚ್ಚು ಕೋಟಿ ವಂಚಿಸಿರುವ ಆರೋಪವಿದೆ. ಸದ್ಯ ಪ್ರಕರಣವನ್ನು ಯಶವಂತಪುರ ಪೊಲೀಸರು ಸಿಐಡಿ ತನಿಖೆಗೆ ವರ್ಗಾಯಿಸಿದ್ದಾರೆ.
ಇದನ್ನೂ ಓದಿ:ವಿಜಯಪುರ ಪಾಲಿಕೆ ಆಯುಕ್ತರ ಮೇಲೆ ಹಲ್ಲೆ : ರಾಜಕೀಯ ಮುಖಂಡನ ಮಗನ ಕೈವಾಡ ಶಂಕೆ, ಪ್ರಕರಣ ದಾಖಲು