ದೊಡ್ಡಬಳ್ಳಾಪುರ: ಪ್ರತಿಯೊಂದು ಗ್ರಾಮದಲ್ಲಿ ಪಂಚಾಯತ್ ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಈ ಗ್ರಾಮ ಪಂಚಾಯತ್ನಲ್ಲಿ ಐದು ಕುಟುಂಬಳಿಗೆ ಮಾತ್ರ ನೀರಿನ ಭಾಗ್ಯ ಇಲ್ಲ. ರಾಜಕೀಯ ದ್ವೇಷದಿಂದ ಪಿಡಿಒ ನೀರಿನ ಸಂಪರ್ಕ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ತಾಲೂಕಿನ ಕೊನಘಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಮಾಮ್ ಗ್ರಾಮದ ಇಬ್ರಾಹಿಂ ಎಂಬುವವರು ತಮ್ಮ ಮಕ್ಕಳಿಗಾಗಿ 5 ಮನೆಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಕೆಲವು ಮನೆಯನ್ನು ಬಾಡಿಗೆ ನೀಡಿದ್ದಾರೆ. ಈ 5 ಮನೆಗಳಲ್ಲಿ 25 ಜನರು ವಾಸವಾಗಿದ್ದು, ಪಂಚಾಯತ್ ವತಿಯಿಂದ ಪ್ರತಿ ಮನೆಗೂ ನೀರಿನ ಪೂರೈಕೆ ಆಗುತ್ತಿದೆ. ಆದರೆ ಈ 5 ಕುಟುಂಬಗಳಿಗೆ ಮಾತ್ರ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದ ಕುಟುಂಬಗಳು ಪ್ರತಿದಿನ ನೀರಿಗಾಗಿ ಪರದಾಡುತ್ತಿವೆ.
ಹಲವು ಬಾರಿ ಮನವಿ ಮಾಡಿದ್ರೂ ಪ್ರಯೋಜವಾಗಿಲ್ಲ:
ಮನೆ ಮಾಲೀಕ ನೀರಿನ ಸಂಪರ್ಕ ಕಲ್ಪಿಸುವಂತೆ ಕೊನಘಟ್ಟ ಗ್ರಾ.ಪಂ.ಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೊನಘಟ್ಟ ಗ್ರಾಪಂ ಪಿಡಿಒ ರಘು ಎಂಬುವವರಿಗೆ ಐದು ಮನೆಗಳಿಗೆ ನೀರಿನ ಸಂಪರ್ಕ ನೀಡುವಂತೆ ಖುದ್ದು ಶಾಸಕ ವೆಂಕಟರಮಣಯ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ಮುರುಡಯ್ಯ, ತಾ.ಪಂ ಅಧ್ಯಕ್ಷ ನಾರಾಯಣಗೌಡ ಇತರೆ ಜನಪ್ರತಿನಿಧಿಗಳು ಸಾಕಷ್ಟು ಬಾರಿ ಹೇಳಿದರೂ ಪಿಡಿಒ ನೀರಿನ ಸಂಪರ್ಕ ನೀಡಿಲ್ಲವೆಂದು ಇಬ್ರಾಹಿಂ ಆರೋಪಿಸಿದ್ದಾರೆ.