ಬೆಂಗಳೂರು: ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಮಾಡಲಾಗಿದ್ದ ನಾಟಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಿದ್ದಾಪುರ ಠಾಣೆ ಪೊಲೀಸರು ಕಾಲೇಜಿನ ಪ್ರಾಂಶುಪಾಲರು ಮತ್ತು ಕಾರ್ಯಕ್ರಮದ ಆಯೋಜಕರು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ 7 ಜನ ವಿದ್ಯಾರ್ಥಿಗಳೂ ಸಹ ಸೇರಿದ್ದಾರೆ. ವಿದ್ಯಾರ್ಥಿಗಳೆಲ್ಲರೂ ಬಿಬಿಎ 5ನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದರು ಎಂದು ತಿಳಿದುಬಂದಿದೆ.
ಫೆಬ್ರುವರಿ 8ರಂದು ನಿಮ್ಹಾನ್ಸ್ ಕನ್ವೆನ್ಸನ್ ಸೆಂಟರ್ನಲ್ಲಿ ಜೈನ್ ವಿವಿಯಿಂದ ಹಮ್ಮಿಕೊಂಡಿದ್ದ ಫೆಸ್ಟ್ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನಿಸಿ ಕೀಳು ಮಟ್ಟದ ನಾಟಕ ಪ್ರದರ್ಶನ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ನಾಟಕದ ಸ್ಕಿಟ್ವೊಂದರಲ್ಲಿ ಬಿ.ಆರ್ ಬದಲು ಬೇರೆ ಪದ ಬಳಸಿ ಗೇಲಿ ಮಾಡಲಾಗಿತ್ತು. ಅಂಬೇಡ್ಕರ್ ಅವಮಾನಿಸಿದ ಈ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ:ಅಂಬೇಡ್ಕರ್ಗೆ ಅವಮಾನ ಆರೋಪ: ಜೈನ್ ವಿವಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್, ತನಿಖೆಗೆ ಸಚಿವರ ಸೂಚನೆ
ಸಮಾಜ ಕಲ್ಯಾಣಾಧಿಕಾರಿ ಮಧುಸೂನ್ ಅವರಿಂದ ದೂರು ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಧುಸೂದನ್ ಎಂಬುವರು ನೀಡಿದ ದೂರಿನ ಮೇರೆಗೆ ಕಾಲೇಜು ಪ್ರಾಂಶುಪಾಲ, ಡೀನ್, ಕಾರ್ಯಕ್ರಮದ ಆಯೋಜಕರು, ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳು ಹಾಗೂ ಸ್ಕಿಟ್ ಬರಹಗಾರರ ವಿರುದ್ಧ ಜಾತಿ ನಿಂದನೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿಂತೆ 9 ಜನರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಲಿತ ಸಂಘಟನೆಗಳಿಂದ ದೂರು:ಇನ್ನು, ಘಟನೆ ಕುರಿತಂತೆ ಜೈನ್ ಕಾಲೇಜ್ ಆಡಳಿತ ಮಂಡಳಿ ವಿರುದ್ಧ 20ಕ್ಕೂ ಹೆಚ್ಚು ದಲಿತ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಬ್ಯಾನ್ ಜೈನ್ ಕಾಲೇಜ್ ಎಂಬ ಅಭಿಯಾನ ಆರಂಭಿಸಲಾಗಿತ್ತು. ಮಾತ್ರವಲ್ಲದೇ, ದಲಿತ ಸಂಘಟನೆಗಳಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಹ ದೂರು ನೀಡಲಾಗಿತ್ತು.
ಪೊಲೀಸ್ ಅಧಿಕಾರಿ ಪ್ರತಿಕ್ರಿಯೆ:ಈ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ವಿಭಾದಗ ಡಿಸಿಪಿ ಪಿ. ಕೃಷ್ಣಕಾಂತ್ ಅವರು ''ಪ್ರಕರಣ ಸಂಬಂಧ ಕಾಲೇಜಿನ ಪ್ರಾಂಶುಪಾಲರು ಮತ್ತು ಕಾರ್ಯಕ್ರಮದ ಆಯೋಜಕರು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ'' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಡಾ ಬಿ ಆರ್ ಅಂಬೇಡ್ಕರ್ ಮತ್ತು ದಲಿತರಿಗೆ ಅವಮಾನ ಆರೋಪ.. ಖಾಸಗಿ ವಿವಿ ಪರವಾನಿಗೆ ರದ್ದು ಮಾಡುವಂತೆ ಒತ್ತಾಯ
ಉನ್ನತ ಶಿಕ್ಷಣ ಸಚಿವರಿಂದ ತನಿಖೆಗೆ ಸೂಚನೆ :ಮತ್ತೊಂದೆಡೆ, ಅಂಬೇಡ್ಕರ್ ಕುರಿತು ಪ್ರದರ್ಶಿಸಿದ ನಾಟಕದ ಕುರಿತು ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ ಅವರು ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ. ಅವರನ್ನು ಇಡೀ ಜಗತ್ತೇ ಗೌರವಿಸುತ್ತಿದೆ. ಅಂಥವರನ್ನು ಅಪಮಾನಿಸಿದ್ದರೆ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪ್ರಜಾ ವಿಮೋಚನಾ ಸಮಿತಿಯಿಂದಲೂ ದೂರು ದಾಖಲು :ಡಾ. ಬಿ ಆರ್ ಅಂಬೇಡ್ಕರ್ ಮತ್ತು ದಲಿತರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಜೈನ್ ವಿವಿಯ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ವಿರುದ್ಧ ಪ್ರಜಾ ವಿಮೋಚನಾ ಸಮಿತಿಯು ದೊಡ್ಡಬಳ್ಳಾಪುರ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಜೊತೆಗೆ ವಿಶ್ವವಿದ್ಯಾಲಯದ ಪರವಾನಿಗೆ ರದ್ದು ಮಾಡುವಂತೆ ಒತ್ತಾಯಿಸಲಾಗಿದೆ. ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ಗೂಳ್ಯ ಹನುಮಣ್ಣ ನೇತೃತ್ವದಲ್ಲಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.