ಬೆಂಗಳೂರು:ಕಳೆದ 9 ತಿಂಗಳುಗಳ ಹಿಂದೆ ಹತ್ಯೆಗೊಳಗಾಗಿದ್ದ ನಗರದ ಕೋಣನಕುಂಟೆ ನಿವಾಸಿ ಶರತ್ ಶವ ಪತ್ತೆಗಾಗಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಚಾರ್ಮಾಡಿ ಘಾಟ್‌ನಲ್ಲಿ ಶೋಧ ನಡೆಸುತ್ತಿದ್ದಾರೆ. ಸಾಲದ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ಶರತ್ ಎಂಬಾತನನ್ನು ಅಪಹರಿಸಿ ಕೊಲೆಗೈದ ಆರೋಪದಡಿ ಪ್ರಮುಖ ಆರೋಪಿಗಳಾದ ಶರತ್ ಕುಮಾರ್ ಹಾಗೂ ಆತನ ತಂದೆ ವೆಂಕಟಚಲಪತಿ ಸೇರಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
ವಿಚಾರಣೆಯ ವೇಳೆ ಕೊಲೆ ಮಾಡಿ ಶವವನ್ನು ಚಾರ್ಮಾಡಿ ಘಾಟ್‌ನಲ್ಲಿ ಬಿಸಾಕಿರುವ ಬಗ್ಗೆ ಆರೋಪಿಗಳು ಹೇಳಿಕೆ ನೀಡಿದ್ದರು. ಇದರ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಗಳೊಂದಿಗೆ ಚಾರ್ಮಾಡಿ ಘಾಟ್‌ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಘಾಟ್ನ ಕಂದಕ ಹಾಗೂ ಪೊದೆಗಳಲ್ಲಿ ಹುಡುಕಾಡಿದ್ದರೂ ಇನ್ನೂ ಶವ ಪತ್ತೆಯಾಗಿಲ್ಲ. ರಾತ್ರಿ ವೇಳೆ ಶವ ಎಸೆದಿದ್ದರಿಂದ ಆರೋಪಿಗಳೂ ಸಹ ಗೊಂದಲದ ಹೇಳಿಕೆ ನೀಡಿದ್ದಾರೆ. ನಿಖರವಾದ ಸ್ಥಳದ ಬಗ್ಗೆ ಹೇಳುವಲ್ಲಿ ವಿಫಲರಾಗಿರುವುದು ಪೊಲೀಸರನ್ನು ಚಿಂತೆಗೀಡು ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಯುವಕನನ್ನು ಅರೆಬೆತ್ತಲೆಗೊಳಿಸಿ, ಹಗ್ಗದಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ತುಣುಕು ಹಾಗೂ ಫೋಟೊ ವೈರಲ್ ಆಗಿತ್ತು. ಘಟನಾವಳಿ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದಾಗ ಕೊತ್ತನೂರಿನ ನಿವಾಸಿ ಶರಣ್ ಎಂಬಾತನನ್ನು ಕಳೆದ ಮಾರ್ಚ್ 21ರಂದು ಬನಶಂಕರಿ ಬಸ್ ನಿಲ್ದಾಣದಿಂದ ಆರೋಪಿಗಳು ಕಾರಿನಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿ ಶರತ್ನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಕೊಲೆಗೀಡಾದವನ ವಿರುದ್ಧವೂ ಪ್ರಕರಣ: ಮೃತ ಶರತ್ ಎಸ್ಸಿ-ಎಸ್ಟಿ ಯೋಜನೆಯಡಿ ಸರ್ಕಾರದಿಂದ ಸಿಗುವ ಸಾಲ ಮಂಜೂರು ಮಾಡಿಸಿಕೊಡುವುದಾಗಿ ಹೇಳಿಕೊಂಡು ಜನರಿಂದ ಹಣ ಪಡೆದು ವಂಚಿಸುತ್ತಿದ್ದ. ವಂಚನೆಯಡಿ ಮೃತನ ವಿರುದ್ಧ ಈ ಹಿಂದೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಮತ್ತೊಂದೆಡೆ, ಆರೋಪಿ ಶರತ್ ಕುಮಾರ್ ತಂದೆ ವೆಂಕಟಚಲಪತಿ ಚಿಕ್ಕಬಳ್ಳಾಪುರದಲ್ಲಿ ಸಂಘಟನೆಯೊಂದರ ಅಧ್ಯಕ್ಷನಾಗಿದ್ದ. ಅಲ್ಲದೆ, ಪ್ರಿಂಟಿಂಗ್ ಪ್ರೆಸ್ವೊಂದರ ಮಾಲೀಕನಾಗಿದ್ದಾನೆ. ಫೈನಾನ್ಸ್ ವ್ಯವಹಾರವೂ ನಡೆಸುತ್ತಿದ್ದ ಮುಖಂಡನ ಮಗ ಶರತ್ ಕುಮಾರ್ ಕೊಲೆಗೀಡಾದ ಶರತ್ಗೆ ಕಳೆದ ವರ್ಷ 20 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದ ಎನ್ನಲಾಗಿದೆ.