ಬೆಂಗಳೂರು: ದೇವಸ್ಥಾನಗಳಲ್ಲಿ ಮೈಕ್ ಬಳಸದಂತೆ ನೋಟಿಸ್ ನೀಡಲಾಗುತ್ತಿದ್ದು, ಮಲ್ಲೇಶ್ವರಂನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಪೂಜಾ ಸಮಯದಲ್ಲಿ ಗಂಟೆ ಬಾರಿಸಿ, ಮಂತ್ರ ಹೇಳಿ, ವಾದ್ಯ ಶಬ್ದ ಮಾಡದಂತೆ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ. ನೋಟಿಸ್ನಲ್ಲಿ ದೇವಸ್ಥಾನದಿಂದ ಅತೀ ಹೆಚ್ಚು ಶಬ್ದ ಹೊರ ಬರುತ್ತಿದೆ. ಇದರಿಂದ ಸುತ್ತಮುತ್ತಲಿನ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಉಲ್ಲೇಖಿಸಲಾಗಿದೆ.
ಈ ಕುರಿತು ಮಲ್ಲೇಶ್ವರಂ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಮಾಧವ ನರಸಿಂಹ ಭಟ್ ಅವರು ಮಾತನಾಡಿ, ದೇವಸ್ಥಾನದಲ್ಲಿ ಗಂಟೆ ಬಾರಿಸದೇ, ಮಂತ್ರ ಹೇಳದೇ ಪೂಜೆ ಮಾಡಲು ಸಾಧ್ಯವೇ ಇಲ್ಲ. ನೂರಾರು ವರ್ಷಗಳಿಂದ ಈ ದೇವಸ್ಥಾನದಲ್ಲಿ ಹಿಂದೂ ಧರ್ಮದ ಆಚರಣೆ ನಡೆಯುತ್ತಿದೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಯಾಕೆ ಆಯ್ತು ಗೊತ್ತಿಲ್ಲ. ನಮ್ಮ ದೇವಸ್ಥಾನದಲ್ಲಿ ಇಲ್ಲಿಯವರೆಗೂ ಮೈಕ್ ಬಳಸಿಲ್ಲ. ನಾವು ಹೇಳುವ ಮಂತ್ರ, ವಾದ್ಯದ ಶಬ್ದ ಗೇಟ್‌ನಿಂದ ಹೊರಗೂ ಕೇಳಿಸುವುದಿಲ್ಲ ಎಂದು ಹೇಳಿದ್ದಾರೆ.
ಮಂತ್ರ ಹೇಳದೇ, ಗಂಟೆ ಬಾರಿಸದೇ ಪೂಜೆ ಮಾಡಿದ್ರೆ ಅದು ದೇವರ ಆರಾಧನೆ ಆಗಲ್ಲ. ಭೂತದ ಆರಾಧನೆ ಆಗುತ್ತೆ. ಯಾರೋ ಮೌಖಿಕವಾಗಿ ದೂರು ನೀಡಿದ್ದಾರಂತೆ. ಆದರೆ ಯಾರು ಎಂದು ಗೊತ್ತಿಲ್ಲ. ನಿತ್ಯ ದೇವಸ್ಥಾನಕ್ಕೆ ಸಾವಿರಾರು ಜನರು ಬರುತ್ತಾರೆ. ಏಪ್ರಿಲ್ 9 ಕ್ಕೆ ಮಲ್ಲೇಶ್ವರಂ ಪೊಲೀಸ್ ಠಾಣೆಯಿಂದ ನೋಟಿಸ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.