ಬೆಂಗಳೂರು :ತಪಾಸಣೆ ನಡೆಸುವಾಗ ಪೊಲೀಸರು ಅನುಮತಿಯಿಲ್ಲದೇ ಸಾರ್ವಜನಿಕರ ಮೊಬೈಲ್ಗಳನ್ನು ಬಲವಂತವಾಗಿ ಕಸಿದುಕೊಂಡು ಪರಿಶೀಲಿಸುವುದು ಸರಿಯಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಪಾಸಣೆ ನಡೆಸುವಾಗ ಸುಖಾಸುಮ್ಮನೆ ಸಾರ್ವಜನರಿಂದ ಪೊಲೀಸರು ಮೊಬೈಲ್ ಕಸಿದುಕೊಂಡು, ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಶ್ನಿಸುತ್ತಿರುವ ದೂರುಗಳು ಕೇಳಿ ಬಂದಿದ್ದವು. ಇದಕ್ಕೆ ಪೂರಕ ಎಂಬಂತೆ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನಿಖಿಲ್ ಎಂಬುವರು ಘಟನೆಯೊಂದರ ಬಗ್ಗೆ ಟ್ವೀಟ್ ಮಾಡಿದ್ದರು.
ಕೆಲದಿನಗಳ ಹಿಂದೆ ಹೆಚ್ಎಸ್ಆರ್ ಲೇಔಟ್ ಬಳಿ ತಡರಾತ್ರಿ ಆಟೋ ಹತ್ತಿದ್ದ ವೇಳೆ ಮಾರ್ಗ ಮಧ್ಯೆ ಆಟೋ ತಪಾಸಣೆ ನಡೆಸುವಾಗ ನನ್ನ ಮೊಬೈಲ್ಅನ್ನು ಪೊಲೀಸರು ಕಸಿದುಕೊಂಡಿದ್ದಾರೆ. ಗೂಗಲ್ನಲ್ಲಿ ಕೆಲ ಪದಗಳ ಸರ್ಚ್ ಮಾಡಿದ್ದಲ್ಲದೇ, ಬ್ರೌಸಿಂಗ್ ಹಿಸ್ಟರಿಯಲ್ಲಿ ಏನೂ ಸಿಗದ ಕಾರಣ ಮೊಬೈಲ್ ವಾಪಸ್ ಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡಿ, ನಗರ ಪೊಲೀಸ್ ಆಯುಕ್ತರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದರು.