ಬೆಂಗಳೂರು: ಕೋಮು ಗಲಭೆ, ಸರ್ಕಾರದ ಆಸ್ತಿ ನಷ್ಟ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಸಾರ್ವಜನಿಕ ಆಸ್ತಿ ಹಾಳು, ಠಾಣೆಗೆ ಬೆಂಕಿ, ದರೋಡೆ, ಹಲ್ಲೆ ಹೀಗೆ ಕುಕೃತ್ಯವೆಸಗಿ ಬಂಧಿತರಾದ ಆರೋಪಿಗಳು ಜೈಲಿನಿಂದ ಸಲೀಸಾಗಿ ಜಾಮೀನು ಪಡೆದು ಹೊರ ಬರಲು ಸಾಧ್ಯವಾಗಬಾರದೆಂದು ಬೆಂಗಳೂರು ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಈ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಸದ್ಯ ಆರೋಪಿಗಳ ಪೋಷಕರು ತಮ್ಮ ಮಕ್ಕಳು ತಪ್ಪು ಮಾಡಿಲ್ಲವೆಂದು ಠಾಣೆ ಎದುರು ಬಂದು ಗಲಾಟೆ ಮಾಡ್ತಿದ್ದಾರೆ. ಜೊತೆಗೆ ಆರೋಪಿಗಳಿಗೆ ಜಾಮೀನು ಕೊಡಿಸುವ ಸಾಧ್ಯತೆಯೂ ಇದೆ. ಹೀಗಾಗಿ ಘಟನೆಯಿಂದ ಹಾನಿಗೊಳಗಾದ ಸಾರ್ವಜನಿಕರಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.