ಬೆಂಗಳೂರು: ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಸೈಬರ್ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಇದೇ ಮೊದಲ ಬಾರಿಗೆ ಸಿಸಿಬಿಯ ಸೈಬರ್ ವಿಭಾಗಕ್ಕೆ ಸಹಾಯಕ ಪೊಲೀಸ್ ಕಮೀಷನರ್ (ಎಸಿಪಿ) ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಸತ್ಯನಾರಾಯಣ್ ಸಿಂಗ್ ಅವರು ಎಸಿಪಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕುರಿತು ರಾಜ್ಯ ಪೊಲೀಸ್ ಇಲಾಖೆ ಆದೇಶಿಸಿದೆ. ಇನ್ನುಳಿದಂತೆ ಒಟ್ಟು ಏಳು ಡಿವೈಎಸ್ಪಿ ಹಾಗೂ 14 ಮಂದಿ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಲಾಗಿದೆ.
ವರ್ಗಾವಣೆಗೊಂಡ ಡಿವೈಎಸ್ಪಿಗಳು:ಗಿರೀಶ್ ಎಸ್.ಬಿ., ಜೋಗಿನ ಗೋಪಾಲ ದೊಡ್ಡಕರಿಯಪ್ಪ, ಧಮೇಂದ್ರ ಹೆಚ್.ಎನ್., ಸತ್ಯನಾರಾಯಣಸಿಂಗ್, ಸಣ್ಣ ತಮ್ಮಪ್ಪಯ್ಯ ಒಡೆಯರ್, ಪುಟ್ಟಸ್ವಾಮಿಗೌಡ, ಪವನ್ ಎನ್.
ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿಯ ಸೈಬರ್ ವಿಭಾಗಕ್ಕೆ ಹೊಸದಾಗಿ ಎಸಿಪಿ ದರ್ಜೆಯ ಹುದ್ದೆಯನ್ನು ಪೊಲೀಸ್ ಇಲಾಖೆ ಸೃಷ್ಟಿಸಿತ್ತು.
ಇದನ್ನೂ ಓದಿ: ಖಾಲಿಯಿರುವ 454 ಪೊಲೀಸ್ ಬ್ಯಾಕ್ ಲಾಗ್ ಹುದ್ದೆಗಳಿಗೆ ಡಿ. 10ರಂದು ಲಿಖಿತ ಪರೀಕ್ಷೆ
ಪೊಲೀಸ್ ವರ್ಗಾವಣೆ ಬಗ್ಗೆ ಕಾನೂನು:ಪೊಲೀಸ್ ಇಲಾಖೆಯಲ್ಲಿ ಪ್ರತಿ ವರ್ಷ ವರ್ಗಾವಣೆ ಆಗುತ್ತಿದೆ. ಇನ್ನು ಮುಂದೆ ಎರಡು ವರ್ಷಗಳ ನಂತರ ವರ್ಗಾವಣೆ ಮಾಡಬೇಕು ಎಂಬ ಕಾನೂನು ರೂಪಿಸಲಾಗುವುದು ಎಂದು ಇತ್ತೀಚೆಗೆ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದರು.
ಶೀಘ್ರದಲ್ಲಿ ಪಿಎಸ್ಐ ಸೇರಿ 4,547 ಮಂದಿ ನೇಮಕಾತಿ:ಆರು ತಿಂಗಳಲ್ಲಿ ಪೊಲೀಸ್ ಇಲಾಖೆಯಲ್ಲಿ4,547 ಮಂದಿಯನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇತ್ತೀಚೆಗೆ ಹೇಳಿದ್ದರು. 1,547 ಮಂದಿ ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳು, 3,000 ಮಂದಿ ಕಾನ್ಸ್ಟೇಬಲ್ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದರು.
ಹೈಕೋರ್ಟ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ 545 ಮಂದಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಹುದ್ದೆಗಳಿಗೆ ಡಿಸೆಂಬರ್ ಅಂತ್ಯದೊಳಗಾಗಿ ಮರುಪರೀಕ್ಷೆ ನಡೆಸಿ ಭರ್ತಿ ಮಾಡಿಕೊಳ್ಳಲಾಗುವುದು. ನಂತರ 402 ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳ ಹುದ್ದೆ ನೇಮಕಾತಿ ನಡೆಯಲಿದೆ. ಆ ಬಳಿಕ 600 ಮಂದಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗುವುದು ಎಂದು ತಿಳಿಸಿದ್ದರು. ಹಾಗೆಯೇ ಮೂರು ಸಾವಿರ ಕಾನ್ಸ್ಟೇಬಲ್ಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದರು.
ಪೊಲೀಸ್ ಇಲಾಖೆಗೆ ಇನ್ನೂ ಹದಿನೈದು ಸಾವಿರ ಕಾನ್ಸ್ಟೇಬಲ್ಗಳ ಅಗತ್ಯವಿದೆ. ಹಂತಹಂತವಾಗಿ ಇದನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದ ಅವರು, ಆಯ್ಕೆಯಾಗುವವರಿಗೆ ತರಬೇತಿ ನೀಡುವ ಅಗತ್ಯವಿರುವುದರಿಂದ ಒಂದೇ ಕಂತಿನಲ್ಲಿ ಇಷ್ಟು ಮಂದಿಯನ್ನು ನೇಮಕ ಮಾಡಿಕೊಳ್ಳುವುದು ಕಷ್ಟ ಎಂದು ಹೇಳಿದರು.