ಬೆಂಗಳೂರು/ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದ ವಿಶೇಷ ಸೇನಾ ವಿಮಾನದ ಮೂಲಕ 10 ನಿಮಿಷ ಮುಂಚಿತವಾಗಿಯೇ ಕಲಬುರಗಿ ಏರ್‌ಪೋರ್ಟ್‌ಗೆ ಆಗಮಿಸಿದರು. ಏರ್ಪೋರ್ಟ್ನಲ್ಲಿ ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಸ್ವಾಗತ ಕೋರಿದ್ದಾರೆ. ಬಳಿಕ ಪ್ರಧಾನಿ Mi-17 ಹೆಲಿಕಾಪ್ಟರ್ ಮೂಲಕ ಕೊಡೆಕಲ್‌ಗೆ ಬಂದಿಳಿದಿದ್ದಾರೆ.
ಯಾದಗಿರಿ ಮತ್ತು ಕಲಬುರಗಿಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಜನವರಿ 12ರಂದು ಸಹ ರಾಜ್ಯಕ್ಕೆ ಮೋದಿ ಭೇಟಿ ನೀಡಿದ್ದರು. ಇದೀಗ ತಿಂಗಳಲ್ಲಿ ಎರಡನೇ ಬಾರಿಗೆ ಆಗಮಿಸಿದ್ದು, ಫೆಬ್ರವರಿಯಲ್ಲಿಯೂ ಎರಡು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ಚುನಾವಣಾ ವರ್ಷವಾಗಿದ್ದು ಪ್ರಧಾನಿ ಸರಣಿ ಪ್ರವಾಸ ಮಹತ್ವ ಪಡೆದಿದೆ.
ಪ್ರಧಾನಿ ಕಾರ್ಯಕ್ರಮಗಳ ವಿವರ: ಮಧ್ಯಾಹ್ನ 12 ಗಂಟೆಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್‌ನಲ್ಲಿ ಆಯೋಜನೆಗೊಂಡಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಕಾಮಗಾರಿ ಲೋಕಾರ್ಪಣೆ, ಜಲ್ ಜೀವನ್ ಮಿಷನ್ ಅಡಿಯಲ್ಲಿ ಯಾದಗಿರಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಚೆನ್ನೈ ಸುರತ್ ಎಕ್ಸ್ಪ್ರೆಸ್ ವೇ ಪ್ಯಾಕೇಜ್-3 ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸುವರು.
ನಂತರ ಕಲಬುರಗಿಯ ಮಳಖೇಡಕ್ಕೆ ಪ್ರಧಾನಿ ಆಗಮಿಸಲಿದ್ದಾರೆ. ಮಧ್ಯಾಹ್ನ 2.15 ರಿಂದ 3 ಗಂಟೆವರೆಗೂ ನೂತನವಾಗಿ ರಚಿಸಲಾಗಿರುವ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ, ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ 51 ಸಾವಿರಕ್ಕೂ ಅಧಿಕ ಲಂಬಾಣಿ ತಾಂಡಾ, ಕುರುಬರ ಹಟ್ಟಿ ಮುಂತಾದ ಕಡೆಗಳಲ್ಲಿ ವಾಸಿಸುವ ಜನರಿಗೆ ಅವರ ವಾಸಸ್ಥಳದ ಹಕ್ಕುಪತ್ರ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3.35ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ನವದೆಹಲಿಗೆ ವಾಪಸ್ ತೆರಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 10,500 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ದೇಶದಲ್ಲಿಯೇ ಪ್ರಥಮವಾಗಿ ಸ್ಕಾಡಾ ತಂತ್ರಜ್ಞಾನ ಬಳಸಿ ಜಲಾಶಯದ ವ್ಯಾಪ್ತಿಯಲ್ಲಿ ಬರುವ 5.50 ಲಕ್ಷ ಹೆಕ್ಟೇರ್ ರೈತರ ಪ್ರದೇಶಗಳಿಗೆ ನೀರುಣಿಸಲು ನೆರವಾದ ಎಡದಂಡೆ ಕಾಲುವೆಯ ಜಾಲದ ವಿಸ್ತರಣೆ ಮತ್ತು ಅತ್ಯಾಧುನಿಕ ರಿಮೋಟ್ ತಂತ್ರಜ್ಞಾನದ ಗೇಟ್‌ಗಳ 4,699 ಕೋಟಿ ರೂ. ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾಮಗಾರಿಯ ಉದ್ಘಾಟನೆ ಹಾಗೂ ಜಲಧಾರೆ ಯೋಜನೆ ಅಡಿಯಲ್ಲಿ 2004 ಕೋಟಿ ರೂ.ಗಳ ವೆಚ್ಚದಲ್ಲಿ ಬಹು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಶಂಕು ಸ್ಥಾಪನೆ ಹಾಗೂ ಭಾರತ ಮಾಲಾ ಯೋಜನೆಯಡಿ ಅಂದಾಜು 2,000 ಕೋಟಿ ರೂ. ವೆಚ್ಚದಲ್ಲಿ ಸೂರತ್-ಚೆನ್ನೈ ಹೆದ್ದಾರಿ ನಿರ್ಮಾಣ (ನಿಂಬಾಳ ನಿಂದ ಸಿಂಗನೋಡಿಗೆ) 6 ಪಥ ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇ ಕಾಮಗಾರಿಗೂ ಚಾಲನೆ ನೀಡಲಿದ್ದಾರೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸ್ನೇಹಲ್.ಆರ್ ತಿಳಿಸಿದ್ದಾರೆ.
ಈಗಾಗಲೇ ಯಾದಗಿರಿ ಕಾರ್ಯಕ್ರಮ ಮತ್ತು ಕಲಬುರಗಿ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಕಂದಾಯ ಸಚಿವ ಆರ್.ಅಶೋಕ್ ಎರಡು ದಿನ ಮೊದಲೇ ಕಲಬುರಗಿಗೆ ತೆರಳಿ ನೂತನ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮದ ಸಿದ್ಧತಾ ಕಾರ್ಯವನ್ನು ಖುದ್ದು ಮೇಲ್ವಿಚಾರಣೆ ಮಾಡಿದ್ದಾರೆ.
ಇದನ್ನೂ ಓದಿ:'ಮಹಾ'- ಕರ್ನಾಟಕಕ್ಕೆ 19ರಂದು ನಮೋ ಭೇಟಿ: ಚುನಾವಣೆ ಹೊಸ್ತಿಲಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ
ಮೋದಿ ಇತ್ತೀಚಿನ ರಾಜ್ಯ ಪ್ರವಾಸ:ಜನವರಿ 12 ರಂದು ಹುಬ್ಬಳ್ಳಿಗೆ ಆಗಮಿಸಿದ್ದ ನರೇಂದ್ರ ಮೋದಿ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಭಾಗವಹಿಸಿದ್ದರು. ಅದಾದ ಒಂದು ವಾರದಲ್ಲೇ ಮತ್ತೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ. ಇದಾದ ನಂತರ ಫೆಬ್ರವರಿಯಲ್ಲಿಯೂ ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಸಿದ್ಧತೆ ನಡೆದಿದೆ. ಫೆಬ್ರವರಿ 12 ರಂದು ಶಿವಮೊಗ್ಗಕ್ಕೆ ಆಗಮಿಸಲಿರುವ ಮೋದಿ, ನೂತನವಾಗಿ ನಿರ್ಮಾಣಗೊಂಡಿರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ. ನಂತರ ಬೆಂಗಳೂರಿಗೆ ಆಗಮಿಸಿ, ಫೆಬ್ರವರಿ 13 ರಂದು ಏಷ್ಯಾದ ಅತಿದೊಡ್ಡ ಏರ್ ಶೋ ಆಗಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಕೆಲ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳ ಆಯೋಜನೆ ಜೊತೆಗೆ ಬೆಂಗಳೂರು ಸಮೀಪದಲ್ಲೇ ಬೃಹತ್ ಸಮಾವೇಶವನ್ನು ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಯಾದಗಿರಿ: ಪ್ರಧಾನಿ ಮೋದಿ ಆಗಮನ ಹಿನ್ನೆಲೆ.. ಜಿಲ್ಲಾಡಳಿತದಿಂದ ಭರದ ಸಿದ್ಧತೆ