ಕರ್ನಾಟಕ

karnataka

ETV Bharat / state

ಆಸ್ತಿ ತೆರಿಗೆ ಕೈಬಿಡುವಂತೆ ಕೋರಿ ಪಿಐಎಲ್: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ದೇಶದ ಪ್ರತಿ ಕ್ಷೇತ್ರದ ಮೇಲೂ ಕೊರೊನಾ ಕರಿಛಾಯೆ ಬೀರಿದ್ದು, ಕಟ್ಟಡ ಮಾಲೀಕರು ಸಹ ಇದರಿಂದ ಹೊರತಾಗಿಲ್ಲ. ಹಾಗಾಗಿ ಪ್ರಸಕ್ತ ವರ್ಷ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ನಗರದ ವಕೀಲ ಕೆ. ಗುರುದತ್ ಅರ್ಜಿ ಸಲ್ಲಿಸಿದ್ದಾರೆ.

High Court
High Court

By

Published : Aug 12, 2020, 3:57 PM IST

ಬೆಂಗಳೂರು: ಮಹಾಮಾರಿ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆ ಕಟ್ಟಡಗಳ ಮಾಲೀಕರಿಗೆ ಬಾಡಿಗೆ ಸಿಗದೆ ನಷ್ಟ ಅನುಭವಿಸುತ್ತಿದ್ದು, ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

2020-21ನೇ ಸಾಲಿನ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವಂತೆ ಹಾಗೂ ಬಲವಂತವಾಗಿ ತೆರಿಗೆ ಸಂಗ್ರಹಿಸಲು ಮುಂದಾಗದಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ನಗರದ ವಕೀಲ ಕೆ. ಗುರುದತ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲ ಎನ್. ಪಿ ಅಮೃತೇಶ್ ವಾದಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾದಿಂದ ಕುಸಿದಿರುವ ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಹಲವು ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸಿವೆ. ಕಾರ್ಮಿಕ ವರ್ಗಕ್ಕೆ, ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸೇರಿದಂತೆ ಹಲವು ವರ್ಗಗಳಿಗೆ ಸಾಕಷ್ಟು ನೆರವು ನೀಡಿದೆ. ಆದರೆ ಮಧ್ಯಮ ವರ್ಗದ ಬಾಡಿಗೆ ಕಟ್ಟಡಗಳ ಮಾಲೀಕರಿಗೆ ಯಾವುದೇ ನೆರವು ನೀಡಿಲ್ಲ. ಹೀಗಾಗಿ ಬಾಡಿಗೆ ಸಿಗದೆ ನಷ್ಟ ಅನುಭವಿಸುತ್ತಿರುವ ಕಟ್ಟಡಗಳ ಮಾಲೀಕರಿಗೂ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವ ಅಗತ್ಯವಿದೆ ಎಂದು ವಿವರಿಸಿದರು.

ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು ಹಾಗೂ ಬಿಬಿಎಂಪಿ ತೆರಿಗೆ ವಿಭಾಗದ ಉಪ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ, ಅರ್ಜಿದಾರರು ನೀಡಿರುವ ಮನವಿ ಪರಿಗಣಿಸುವ ಕುರಿತು ನಿಲುವು ಸ್ಪಷ್ಟಪಡಿಸಲು ಸೂಚಿಸಿ ಆಗಸ್ಟ್ 27ಕ್ಕೆ ವಿಚಾರಣೆ ಮುಂದೂಡಿತು.

ಅರ್ಜಿದಾರರ ಕೋರಿಕೆ:

ನಗರ ಪ್ರದೇಶಗಳಲ್ಲಿರುವ ಕಟ್ಟಡಗಳಿಂದ ಬರುವ ಆದಾಯದಲ್ಲಿ ಶೇ 20 ರಿಂದ 25ರಷ್ಟನ್ನು ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷ ಆಸ್ತಿ ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತವೆ. ಆದರೆ ಈ ವರ್ಷ ಕಟ್ಟಡಗಳ ಮಾಲೀಕರಿಗೆ ಸರಿಯಾಗಿ ಬಾಡಿಗೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಕಂದಾಯ ಸಚಿವರು ಟಿವಿ ಮಾಧ್ಯಮಗಳಲ್ಲಿ ಕೂತು, ಕಟ್ಟಡಗಳ ಮಾಲೀಕರು ಬಾಡಿಗೆಗಾಗಿ ಬಲವಂತ ಮಾಡುವಂತಿಲ್ಲ, ಖಾಲಿ ಮಾಡಿಸುವಂತಿಲ್ಲ. ಮಾಡಿದರೆ ಬಾಡಿಗೆದಾರರು ಪೊಲೀಸ್ ದೂರು ನೀಡಬಹುದು. ವಿಪತ್ತು ನಿರ್ವಹಣಾ ಕಾಯ್ದೆಯಡಿ ಇದಕ್ಕೆ ಒಂದು ವರ್ಷ ಜೈಲು ಶಿಕ್ಷೆ ನೀಡಬಹುದು ಎಂದು ಹೇಳಿಕೆ ನೀಡಿದ್ದಾರೆ.

ಇದರ ನಡುವೆ ಬಿಬಿಎಂಪಿ ತೆರಿಗೆ ವಿಭಾಗದ ಅಧಿಕಾರಿಗಳು ಆಸ್ತಿ ತೆರಿಗೆ ವಸೂಲಿಗೆ ಮುಂದಾಗಿದ್ದಾರೆ. 2020-21ನೇ ಸಾಲಿನ ಆಸ್ತಿ ತೆರಿಗೆಯಿಂದ ವಿನಾಯಿತಿ ಕೋರಿ ಮೇ.11 ರಂದು ಮನವಿ ಸಲ್ಲಿಸಿದ್ದರೂ ಕೂಡ ಸರ್ಕಾರ ಪರಿಗಣಿಸಿಲ್ಲ. ಹೀಗಾಗಿ ಒತ್ತಾಯಪೂರ್ವಕವಾಗಿ ತೆರಿಗೆ ಸಂಗ್ರಹಿಸದಂತೆ ಪಾಲಿಕೆಗೆ ನಿರ್ದೇಶಿಸಬೇಕು ಮತ್ತು ಪ್ರಸಕ್ತ ವರ್ಷ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ABOUT THE AUTHOR

...view details