ಕರ್ನಾಟಕ

karnataka

ETV Bharat / state

ಹಿಜಾಬ್ ಧರಿಸಿದವರನ್ನು ಮಾಧ್ಯಮಗಳು ಚಿತ್ರೀಕರಣ ಮಾಡದಂತೆ ಕೋರಿ ಹೈಕೋರ್ಟ್​ಗೆ ಅರ್ಜಿ

ಕಳೆದ ಫೆ.10ರಂದು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ, ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಉಡುಪು ಧರಿಸದಂತೆ ಹೇಳಿದೆ. ಇದೇ ವೇಳೆ ಈ ಆದೇಶವು ವಸ್ತ್ರ ಸಂಹಿತೆ ನಿಗದಿ ಮಾಡಿರುವ ಶಾಲೆಗಳಲ್ಲಿ ಅನ್ವಯವಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್

By

Published : Feb 22, 2022, 9:49 PM IST

ಬೆಂಗಳೂರು :ಹಿಜಾಬ್ ಧರಿಸಿ ಶಾಲೆ ಕಾಲೇಜುಗಳಿಗೆ ಬರುವ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರನ್ನು ಬೆನ್ನಟ್ಟಿ ವಿಡಿಯೋ ಚಿತ್ರೀಕರಣ ಹಾಗೂ ಫೋಟೋ ತೆಗೆದು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ನಿರ್ಬಂಧಿಸಬೇಕು ಎಂದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತಂತೆ ಬೆಳಗಾವಿಯ ಅಬ್ದುಲ್ ಮನ್ಸೂರ್, ಮೊಹಮ್ಮದ್ ಖಲೀಲ್ ಹಾಗೂ ಆಸಿಫ್ ಅಹ್ಮದ್ ಎಂಬುವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಹಿಜಾಬ್ ಗೆ ಸಂಬಂಧಿಸಿದ ರಿಟ್ ಅರ್ಜಿಗಳ ಜತೆಗೇ ವಿಚಾರಣೆ ನಡೆಸಲು ಹೈಕೋರ್ಟ್ ನಿರ್ಧರಿಸಿದೆ.

ಅರ್ಜಿಯಲ್ಲಿ, ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು ಹಿಜಾಬ್ ಅಥವಾ ಸ್ಕಾರ್ಫ್ ಕಟ್ಟಿಕೊಂಡು ಶಾಲೆಗೆ ಹೋಗುವ ವೇಳೆ ಮಾಧ್ಯಮ ಪ್ರತಿನಿಧಿಗಳು ಚಿತ್ರೀಕರಿಸುತ್ತಿದ್ದಾರೆ. ಧಾರ್ಮಿಕ ನಂಬಿಕೆಯಲ್ಲಿ ತೊಟ್ಟಿರುವ ಉಡುಪನ್ನು ಅಪರಾಧ ಎಂಬಂತೆ ಬಿಂಬಿಸುವ ಮೂಲಕ ಅಪಮಾನ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ಹಿಜಾಬ್, ಬುರ್ಕಾ ತೆಗೆಯುವುದನ್ನು ಕೂಡ ಚಿತ್ರೀಕರಣ ಮಾಡುತ್ತಿದ್ದಾರೆ.

ಕಳೆದ ಫೆ.10ರಂದು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ, ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಉಡುಪು ಧರಿಸದಂತೆ ಹೇಳಿದೆ. ಇದೇ ವೇಳೆ ಈ ಆದೇಶವು ವಸ್ತ್ರ ಸಂಹಿತೆ ನಿಗದಿ ಮಾಡಿರುವ ಶಾಲೆಗಳಲ್ಲಿ ಅನ್ವಯವಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ, ಮಾಧ್ಯಮಗಳು ಈ ಆದೇಶವನ್ನು ಎಲ್ಲೆಡೆಯೂ ಅನ್ವಯಿಸುತ್ತದೆ ಎಂಬಂತೆ ತಪ್ಪಾಗಿ ಅರ್ಥೈಸುವ ಪ್ರಯತ್ನ ಮಾಡುತ್ತಿವೆ. ಇದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದ್ದು, ಸ್ಪಷ್ಟ ನ್ಯಾಯಾಂಗ ನಿಂದನೆಯಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ : ಹಿಜಾಬ್​ ಕೇಸ್​ ಈ ವಾರವೇ ಇತ್ಯರ್ಥಪಡಿಸೋಣ ಎಂದ ಹೈಕೋರ್ಟ್: ಸರ್ಕಾರ, ಕಾಲೇಜು ಆಡಳಿತ ಮಂಡಳಿ ವಾದಿಸಿದ್ದೇನು..?

ಅಲ್ಲದೇ, ಹಿಜಾಬ್ ಅಥವಾ ಸ್ಕಾರ್ಫ್ ಧರಿಸಿ ಶಾಲೆ-ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳನ್ನು ಬೆನ್ನತ್ತಿ ಹೋಗಿ ಚಿತ್ರೀಕರಿಸದಂತೆ, ಅವುಗಳನ್ನು ತೆಗೆಯುವ ಸಂದರ್ಭದಲ್ಲಿ ಚಿತ್ರೀಕರಿಸದಂತೆ ಹಾಗೂ ಪ್ರಸಾರ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಬೇಕು ಎಂದು ಕೋರಿದ್ದಾರೆ.

ಅರ್ಜಿಯಲ್ಲಿ ರಾಜ್ಯದ ಎಲ್ಲ ಪ್ರಮುಖ ಪತ್ರಿಕೆಗಳು, ಸುದ್ದಿ ವಾಹಿನಿಗಳು, ಡಿಜಿಟಲ್ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿದಾರರ ಪರ ವಕೀಲ ಎಸ್ ಬಾಲಕೃಷ್ಣನ್ ವಾದ ಮಂಡಿಸಲಿದ್ದಾರೆ.

ABOUT THE AUTHOR

...view details