ಕರ್ನಾಟಕ

karnataka

ETV Bharat / state

ಹಿಜಾಬ್ ಬ್ಯಾನ್‌ನಿಂದ ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣ ವಂಚಿತ, ನಷ್ಟ ಭರಿಸಲು ಶಿಫಾರಸು: PUCL ವರದಿ - ಈಟಿವಿ ಭಾರತ ಕರ್ನಾಟಕ

ಹಿಜಾಬ್​ ನಿಷೇಧದಿಂದ ಮುಸ್ಲಿಂ ಸಮುದಾಯದ ಹಲವು ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು PUCL ಕರ್ನಾಟಕ, ರಾಜ್ಯದ ಐದು ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ.

HIJABBAN
ಹಿಜಾಬ್​ ಬ್ಯಾನ್ ವರದಿ ಸಿದ್ದಪಡಿಸಿದ PUCL

By

Published : Jan 11, 2023, 6:59 AM IST

ಬೆಂಗಳೂರು:ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಹಲವು ಮುಸ್ಲಿಂ ಹೆಣ್ಣು ಮಕ್ಕಳ ಸಾಂವಿಧಾನಿಕ ಹಕ್ಕಾದ ಶಿಕ್ಷಣದಿಂದ ವಂಚಿತರನ್ನಾಗಿಸಿದೆ. ರಾಜ್ಯ ಸರ್ಕಾರ ಈ ನಷ್ಟ ಭರಿಸಿಕೊಡಬೇಕು ಎಂದು ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್‌) ಕರ್ನಾಟಕ ಬಿಡುಗಡೆಗೊಳಿಸಿದ ವರದಿಯಲ್ಲಿ ಶಿಫಾರಸು ಮಾಡಿದೆ. 'ಶಿಕ್ಷಣ ದ್ವಾರವನ್ನು ಮುಚ್ಚುವಿಕೆ, ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕು ಉಲ್ಲಂಘನೆ' ಶೀರ್ಷಿಕೆಯ ವರದಿಯಲ್ಲಿ ಹೈ ಕೋರ್ಟ್ ನೀಡಿದ ತೀರ್ಪಿನಲ್ಲಿ ಹಿಜಾಬ್ ಅ​ನ್ನು ತಕ್ಷಣದಿಂದ ನಿಷೇಧಿಸಬೇಕೆಂದು ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿರಲಿಲ್ಲ‌. ಆದರೂ ಶಿಕ್ಷಣ ಸಂಸ್ಥೆಗಳು ಏಕಾಏಕಿ ನಿರ್ಬಂಧಿಸಿದ್ದವು. ವಿದ್ಯಾರ್ಥಿನಿಯರ ಹಕ್ಕನ್ನು ಗೌರವಿಸದೇ ಶಾಲೆ, ಪಿಯು ಕಾಲೇಜು, ಪದವಿ ಕಾಲೇಜುಗಳು ಹಿಜಾಬ್​ಗೆ ನಿಷೇಧ ಹೇರಿದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ಹೈ ಕೋರ್ಟ್ ಎಲ್ಲಾ ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿಲ್ಲ ಎಂಬುದನ್ನು ಕಾಲೇಜು ಶಿಕ್ಷಣ ಇಲಾಖೆ, ಶಿಕ್ಷಣ ಇಲಾಖೆ ಸ್ಪಷ್ಟಪಡಿಸಬೇಕು. ಆ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ತಪ್ಪಾಗಿ ಹಿಜಾಬ್ ಬ್ಯಾನ್ ತಪ್ಪಿಸಬೇಕು. ಈ ತಾರತಮ್ಯದ ವಿರುದ್ಧ ಶಿಕ್ಷಣ ಇಲಾಖೆ ಕಾಲೇಜು ಅಧಿಕಾರಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ ಎಂದು ವರದಿ ಹೇಳಿದೆ.

ಪಿಯುಸಿಎಲ್‌ ರಾಜ್ಯದ ಐದು ಜಿಲ್ಲೆಗಳಾದ ಹಾಸನ, ದ.ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ರಾಯಚೂರಿನಲ್ಲಿ ಅಧ್ಯಯನ ನಡೆಸಿ ಈ ವರದಿ ಸಿದ್ಧಪಡಿಸಿದೆ. ಅಧ್ಯಯನ ತಂಡವು ಪಿಯು ಕಾಲೇಜು, ಪದವಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದೆ ಎಂದು ಹೇಳಿದೆ. ಇದರ ಆಧಾರದಲ್ಲಿ ವಿದ್ಯಾರ್ಥಿನಿಯರ ಮೂಲಭೂತ ಹಕ್ಕಿನ‌ ಉಲ್ಲಂಘನೆಯಾಗಿದೆ. ಜೊತೆಗೆ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಪೊಲೀಸರು ಯಾವ ರೀತಿ ತಮ್ಮ ಸಾಂವಿಧಾನಿಕ ಬದ್ಧತೆಯನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ವಿವರಿಸಿದೆ.

ತಮ್ಮ ಅನೇಕ ಸ್ನೇಹಿತರು, ಸಹಪಾಠಿಗಳೇ ಹಿಜಾಬ್​ಗೆ ವಿರೋಧ ವ್ಯಕ್ತಪಡಿಸಿರುವುದು ನೊಂದ ವಿದ್ಯಾರ್ಥಿನಿಯರಿಗೆ ಆಘಾತ ಉಂಟುಮಾಡಿದೆ. ಆ ಮೂಲಕ ಹಠಾತ್ ತಮ್ಮ ಶಾಲೆ, ಸಹಪಾಠಿಗಳು, ಶಿಕ್ಷಕರ ಬೆಂಬಲ ಕಳೆದುಕೊಂಡಿದ್ದು ನೊಂದ ವಿದ್ಯಾರ್ಥಿನಿಯರು ಮಾನಸಿಕವಾಗಿ ಕುಗ್ಗಿದ್ದಾರೆ. ಮುಸ್ಲಿಂ ಸಮುದಾಯ ಈ ಬಿಕ್ಕಟ್ಟನ್ನು ಏಕಾಂಗಿಯಾಗಿ ಅನುಭವಿಸಿದರು. ಹೆಚ್ಚಿನ ಭಾರತೀಯ ನಾಗರೀಕರು ತಮ್ಮ ಮೂಲಭೂತ ಹಕ್ಕಿನ ರಕ್ಷಣೆಗಾಗಿ ತಮ್ಮ ಜೊತೆ ಹೆಗಲು ಕೊಟ್ಟು ನಿಲ್ಲಬೇಕಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಇದರಿಂದಾಗಿ ಹಲವು ವಿದ್ಯಾರ್ಥಿನಿಯರ ಪರೀಕ್ಷೆ ಬರೆಯುವ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಅಲ್ಲದೇ ಇಡೀ ವರ್ಷದ ಕಾಲೇಜು ಶುಲ್ಕ ನಷ್ಟವಾಗಿದೆ. ವಿದ್ಯಾರ್ಥಿನಿಯರನ್ನು ಕಲಿಕಾ ಅವಕಾಶದಿಂದ ವಂಚಿತಗೊಳಿಸಲಾಯಿತು. ಇದು ಮಾನಸಿಕವಾಗಿ ವಿದ್ಯಾರ್ಥಿನಿಯರ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಕೆಲ ವಿದ್ಯಾರ್ಥಿನಿಯರು ತಮ್ಮ ನೋವನ್ನು ಹಂಚುತ್ತಾ, ಆ ಸಂದರ್ಭ ನಮಗೆ ಹೆಚ್ಚಿನ ಆಯ್ಕೆಗಳು ಇರಲಿಲ್ಲ. ಇನ್ನೊಂದು ಕಾಲೇಜಿಗೆ ವರ್ಗಾವಣೆಯಾಗಲು ಸಾಧ್ಯವಿರಲಿಲ್ಲ. ಹೀಗಾಗಿ ನಾನು ಬಲವಂತವಾಗಿ ಹಿಜಾಬ್ ತೆಗೆಯಬೇಕಾಯಿತು. ಹಿಜಾಬ್ ಇಲ್ಲದೇ ನಗ್ನವಾಗಿದ್ದೇವೆ ಎಂಬ ಭಾವನೆ ಅವರಿಗೆ ಬಂತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಉಲ್ಲೇಖಿಸಿದೆ.

ಹಿಜಾಬ್‌ ಸಂಘರ್ಷ, ಕೋರ್ಟ್‌ ತೀರ್ಪು: ರಾಜ್ಯಾದ್ಯಂತ 2021ರಲ್ಲಿ ಹಿಜಾಬ್ ಗಲಾಟೆ ಜೋರಾಗಿತ್ತು. ಡಿಸೆಂಬರ್ 31, 2021ರಲ್ಲಿ ಉಡುಪಿಯ ಪಿಯು ಕಾಲೇಜಿನ ಆರು ವಿದ್ಯಾರ್ಥಿನಿಯರಿಗೆ ಕ್ಲಾಸ್ ರೂಂನಲ್ಲಿ ಹಿಜಾಬ್ ಧರಿಸಿ ಕುಳಿತುಕೊಳ್ಳಲು ಅವಕಾಶ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಹೈ ಕೋರ್ಟ್ ಮೊರೆ ಹೋಗಿದ್ದರು. ಹೈ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಫೆ.10, 2022ರಂದು ಹಿಜಾಬ್​ ನಿರ್ಬಂಧಿಸಿ ಮಧ್ಯಂತರ ಆದೇಶ ಹೊರಡಿಸಿತ್ತು.

ಇದನ್ನೂ ಓದಿ:ಸಿವಿಲ್ ಪ್ರಕರಣದಲ್ಲಿ ವಕೀಲರ ಥಳಿಸಿದ್ದ ಆರೋಪ: ಪೊಲೀಸರ ವಿರುದ್ಧ ಹೈಕೋರ್ಟ್ ಗರಂ

ABOUT THE AUTHOR

...view details