ಕರ್ನಾಟಕ

karnataka

ಮೋದಿ ಪರ ಜನರ ವಿಶ್ವಾಸ ಕಡಿಮೆ‌ ಆಗುತ್ತಿದೆ: ಸಿದ್ದರಾಮಯ್ಯ

By

Published : Oct 24, 2019, 3:31 PM IST

ಬಿಜೆಪಿಗೆ ಸ್ವತಂತ್ರ ಅಧಿಕಾರ ಸಿಗುತ್ತಿಲ್ಲ. ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ಅಂತ ಹೇಳಿದ್ದ ಎಲ್ಲಾ ಸಮೀಕ್ಷೆಗಳು ಸುಳ್ಳಾಗಿವೆ. ಕಾಂಗ್ರೆಸ್​ಗೆ ಬೆಂಬಲ ಹೆಚ್ಚಾಗುತ್ತಿದೆ. ಕಾಂಗ್ರೆಸ್​ನ ಸಾಕಷ್ಟು ನಾಯಕರು ಬಿಜೆಪಿ ಸೇರಿದರು. ಆದರೆ, ಜನ ಬುದ್ಧಿವಂತರಿದ್ದಾರೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು.

ಬೆಂಗಳೂರು: ಮಹಾರಾಷ್ಟ್ರ, ಹರಿಯಾಣ ಫಲಿತಾಂಶಗಳ ಟ್ರೆಂಡ್ ನೋಡಿದರೆ ಮೋದಿಗೆ ಜನರ ವಿಶ್ವಾಸ ಕಡಿಮೆ ಆಗುತ್ತಿದೆ ಎಂಬುದು ಸ್ಪಷ್ವವಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲೂ ಬಿಜೆಪಿಗೆ ಸ್ವತಂತ್ರ ಅಧಿಕಾರ ಸಿಗುತ್ತಿಲ್ಲ. ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ಅಂತ ಹೇಳಿದ್ದ ಎಲ್ಲಾ ಸಮೀಕ್ಷೆಗಳು ಸುಳ್ಳಾಗಿವೆ. ಕಾಂಗ್ರೆಸ್​ಗೆ ಬೆಂಬಲ ಹೆಚ್ಚಾಗುತ್ತಿದೆ. ಕಾಂಗ್ರೆಸ್​ನ ಸಾಕಷ್ಟು ನಾಯಕರು ಬಿಜೆಪಿ ಸೇರಿದರು. ಆದರೆ, ಜನ ಬುದ್ಧಿವಂತರಿದ್ದಾರೆ. ಬಿಜೆಪಿ ದುರಾಲೋಚನೆಗೆ ಹೊಡೆತ ಬಿದ್ದಿದೆ. ಶಿವಸೇನೆ ಬಿಜೆಪಿ ಜೊತೆಗೆ ಸೇರದಿದ್ದರೆ ಅಧಿಕಾರ ತಪ್ಪುತ್ತದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಚುನಾವಣಾ ಪ್ರಚಾರದಲ್ಲಿ ಎಲ್ಲೂ ಐದು ವರ್ಷದ ಸಾಧನೆಗಳ ಬಗ್ಗೆ ಮಾತನಾಡಿಲ್ಲ. ಕೇವಲ ಪಾಕ್, ಕಾಶ್ಮೀರದಂತಹ ಭಾವನಾತ್ಮಕ ವಿಚಾರ ಇಟ್ಟುಕೊಂಡು ಬಿಜೆಪಿಯವರು ಪ್ರಚಾರ ನಡೆಸಿದರು. ಬಿಜೆಪಿಗೆ ಜನ ಮನ್ನಣೆ ಇಲ್ಲ, ಶೇಕಡಾವಾರು ಮತಗಳು ಕೂಡ ಕಡಿಮೆ ಆಗಿದೆ‌ ಎಂದು ಹೇಳಿದರು.

ರಾಹುಲ್ ಗಾಂಧಿ ಮಹಾರಾಷ್ಟ್ರ, ಹರಿಯಾಣದಲ್ಲೂ ಪ್ರಚಾರ ಮಾಡಿದ್ದರು. ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ. ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಸಂಪನ್ಮೂಲಗಳ ಕೊರತೆ ಇತ್ತು. ಸೋನಿಯಾ ಅನಾರೋಗ್ಯದ ಕಾರಣಕ್ಕೆ ಬಂದಿರಲಿಲ್ಲ ಎಂದು ತಿಳಿಸಿದರು.

ನಾನೂ ಮಹಾರಾಷ್ಟ್ರದಲ್ಲಿ ಮೂರು ಕಡೆ ಪ್ರಚಾರ ಮಾಡಿದ್ದೆ. ಆ ಪೈಕಿ ಎರಡು ಕಡೆ ಗೆಲುವು ಸಾಧಿಸಿದ್ದು ಕಾಂಗ್ರೆಸ್​ಗೆ ಮುನ್ನಡೆ ಇದೆ. ಜತ್, ಸಾಂಗ್ಲಿ, ಅಕ್ಕಲಕೋಟೆಯ, ಮಂಜೇಶ್ವರದಲ್ಲಿ ಪ್ರಚಾರ ಮಾಡಿದ್ದೆ ಎಂದು ಹೇಳಿದ್ರು.

ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ:

ಪಕ್ಷಾಂತರಿಗಳನ್ನು ಜನ ಸೋಲಿಸುತ್ತಾರೆ. ಮಹಾರಾಷ್ಟ್ರದಲ್ಲೂ ಪಕ್ಷಾಂತರಿಗಳನ್ನು ಜನ ಸೋಲಿಸಿದ್ದಾರೆ. ಇಲ್ಲೂ ಕೂಡ ಉಪಚುನಾವಣೆಯಲ್ಲಿ 15 ಸ್ಥಾನದಲ್ಲಿ ನಾವು ಬಹುತೇಕ ಗೆಲ್ಲಲಿದ್ದು, ಯಡಿಯೂರಪ್ಪ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಇದೇ ವೇಳೆ ಭವಿಷ್ಯ ನುಡಿದರು.

ಕಾಂಗ್ರೆಸ್ ಹೆಚ್ಚಿನ ಸ್ಥಾನದಲ್ಲಿ ಗೆಲ್ಲಲಿದೆ. ಹಾಗಂತ ನಾವು ಸರ್ಕಾರ ಮಾಡುವುದಕ್ಕೆ ಆಗುವುದಿಲ್ಲ. ನಾವು ಚುನಾವಣೆಗೆ ಹೋಗುತ್ತೇವೆ. ನಮಗೆ ಬಹುಮತ ಇಲ್ಲವಲ್ಲ. ಯಡಿಯೂರಪ್ಪ ತರ ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆ ಮಾಡುವುದಕ್ಕೆ ಹೋಗುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಆಗ ಜೆಡಿಎಸ್ ಜತೆ ಮೈತ್ರಿ ಮಾಡಿದೆವು. ಆದರೆ ಮೈತ್ರಿ ಮಾಡಿ ಈಗ ನಮಗೆ ಅನುಭವ ಆಗಿದೆ ಎಂದು ಪರೋಕ್ಷವಾಗಿ ಜೆಡಿಎಸ್​ಗೆ ಟಾಂಗ್ ನೀಡಿದರು.

ಈಗಲೂ ಇವಿಎಂ ಮೇಲೆ ಅನುಮಾನ ಇದೆ:

ನನಗೆ ಈಗಲೂ ಇವಿಎಂ ಮೇಲೆ ಅನುಮಾನ ಇದೆ. ಸಂಸತ್ತಿನ ಚುನಾವಣೆ ವೇಳೆ ನನಗೆ ಮತಯಂತ್ರ ಬಗ್ಗೆ ಅನುಮಾನ‌ ಇತ್ತು ಎಂದು ತಿಳಿಸಿದರು.

ಈ ಅನುಮಾನ ನಿವಾರಣೆ ಆಗಲು, ಈ ಹಿಂದಿನ ಮತಪತ್ರ ವಾಪಸು ತರಬೇಕು. ಆಗ ಪಾರದರ್ಶಕವಾಗಿ ಚುನಾವಣೆ ನಡೆಯುತ್ತದೆ. ಎಲ್ಲ ಪಕ್ಷ ಅನುಮಾನ ವ್ಯಕ್ತಪಡಿಸಿದಾಗ, ನೀವೇಕೆ ಮತ ಯಂತ್ರಕ್ಕೆ ಅಂಟಿಕೊಂಡಿದ್ದೀರಾ?. ವಾಪಸು ಮತಪತ್ರಕ್ಕೆ ಹೋಗಿ. ಈ ಚುನಾವಣೆಯಲ್ಲಿ ಇವಿಎಂ ತಿರುಚಿದ್ದಾರೆ ಎಂದು ಹೇಳಲ್ಲ ಎಂದು ತಿಳಿಸಿದರು.

ABOUT THE AUTHOR

...view details