ಬೆಂಗಳೂರು :ಗ್ಯಾರಂಟಿಗಳು ನಮ್ಮನ್ನು ಮಕಾಡೆ ಮಲಗಿಸಿವೆ ಎಂಬ ಹೇಳಿಕೆಯಿಂದ ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಯೂ ಟರ್ನ್ ಹೊಡೆದಿದ್ದಾರೆ. ಗಾಂಧೀಜಿ ತಿಪಟೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ ಹೋಗಿದ್ದರು. ಆ ಸ್ಥಳವನ್ನು ಅಭಿವೃದ್ಧಿ ಮಾಡುವ ಬಗ್ಗೆ ಚರ್ಚೆಯಾಯಿತು. ಈ ಸಂದರ್ಭದಲ್ಲಿ ಅಭಿವೃದ್ಧಿ ಬಗ್ಗೆ ಜನ ನನ್ನಲ್ಲಿ ಪ್ರಸ್ತಾಪಿಸಿದರು. ಅದಕ್ಕೆ ನಾನು, ಐದು ಗ್ಯಾರಂಟಿಗಳಿಂದ ಮಲಗಿಕೊಳ್ಳುವ ರೀತಿ ಮಾಡುವೆ ಅಂತ ಹೇಳಿದ್ದೆ ಅಷ್ಟೇ. ಐದು ಗ್ಯಾರಂಟಿಗಳು ನಮ್ಮನ್ನು ಮಲಗಿಸಿಲ್ಲ, ಎಚ್ಚರದಿಂದ ಇದ್ದೇವೆ ಎಂದು ತಿಳಿಸಿದರು.
ಯಾವ ಅಸಮಾಧಾನವೂ ಇಲ್ಲ, ಅನುದಾನವೂ ಬಿಡುಗಡೆ ಆಗ್ತಿದೆ. ನಾನು ತೃಪ್ತನಾಗಿದ್ದೇನೆ. ಸಿಎಂ ಜೊತೆಗೂ ಚೆನ್ನಾಗಿದ್ದೇನೆ. ಎಂತೆಂಥ ಸಂದರ್ಭದಲ್ಲೂ ನಾನು ಅಸಮಾಧಾನ ಹೊರ ಹಾಕಿಲ್ಲ. ಈಗೇಕೆ ಅಸಮಾಧಾನಗೊಳ್ಳಲಲಿ. ಯಾವುದೇ ಆಕಾಂಕ್ಷೆಯೂ ಇಲ್ಲ. ನಮ್ಮಲ್ಲಿ ರೆಬೆಲ್ಲೇ ಇಲ್ಲ. ಪ್ರತ್ಯೇಕ ಟೀಂ ಎಲ್ಲಿಂದ ಬರುತ್ತೆ?. ಅನುದಾನ ಕೇಳಬೇಕಾಗಿರುವುದು ನಮ್ಮ ಹಕ್ಕು. ಸುಮ್ಮನಿದ್ದರೆ ಆಗುತ್ತಾ?. ಅದನ್ನು ತಪ್ಪು ಅಂಥ ಹೇಳುವುದಕ್ಕೆ ಆಗುತ್ತಾ?. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದರು.
ಕೊಬ್ಬರಿಗೆ ಬೆಂಬಲ ಬೆಲೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕೊಬ್ಬರಿಗೆ ಬೆಂಬಲ ಬೆಲೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿಲ್ಲ. ನಮ್ಮ 25 ಜನ ಸಂಸದರು ಚಕಾರ ಎತ್ತುತ್ತಿಲ್ಲ. ಅದಕ್ಕೆ ನಾನು ಹೊಣೆನಾ?. ಸಂಸದರು ಕೊಬ್ಬರಿ ಬೆಲೆ ಏರಿಕೆ ಬಗ್ಗೆ ಕೇಂದ್ರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.
ತಿಪಟೂರನ್ನು ಜಿಲ್ಲೆಯನ್ನಾಗಿ ಮಾಡುವ ಬೇಡಿಕೆ ಬಗ್ಗೆ ಮಾತನಾಡಿ, ತಿಪಟೂರು ಜಿಲ್ಲಾ ಕೇಂದ್ರವಾಗಲೂ ಎಲ್ಲಾ ರೀತಿಯಲ್ಲೂ ಅರ್ಹವಾಗಿದೆ. ಮೂಲಸೌಕರ್ಯ ಕಲ್ಪಿಸಿ ಕೊಟ್ಟಿದ್ದೇನೆ. ಎಲ್ಲಾ ಇಲಾಖೆಯ ಉಪವಿಭಾಗ ಕಚೇರಿಗಳೂ ಇವೆ. ಸಚಿವ ರಾಜಣ್ಣ ಮಧುಗಿರಿ ಜಿಲ್ಲಾ ಕೇಂದ್ರ ಮಾಡಿ ಅಂತಿದ್ದಾರೆ. ನಾನು ತಿಪಟೂರು ಜಿಲ್ಲಾ ಕೇಂದ್ರ ಮಾಡಿ ಅಂತ ಹೇಳಿದ್ದೇನೆ. ಸಿಎಂ ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಂತಿಮವಾಗಿ ಸಿಎಂ ತೀರ್ಮಾನಕ್ಕೆ ನಾವು ಬದ್ಧ ಎಂದರು.