ಬೆಂಗಳೂರು:ಕೋವಿಡ್ -19ನ ಎರಡನೇ ಅಲೆ ಹಿನ್ನೆಲೆ ಜಾರಿಯಾಗಿದ್ದ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ, ಕಿರುತೆರೆ ಕಲಾವಿದರು, ತಂತ್ರಜ್ಞರು ಹಾಗೂ ಚಲನಚಿತ್ರ ಮಂದಿರದ ಕಾರ್ಮಿಕರಿಗೆ ಮುಖ್ಯಮಂತ್ರಿ ಘೋಷಿಸಿದ್ದ ಮೂರು ಸಾವಿರ ರೂ. ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ನೆರವಿಗಾಗಿ ಸೇವಾಸಿಂಧು ಪೋರ್ಟಲ್ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆನ್ಲೈನ್ ಅರ್ಜಿ ಆಹ್ವಾನಿಸಿದೆ.
ರಾಜ್ಯದಲ್ಲಿ ಎರಡನೇ ಅಲೆಯ ವೇಳೆ ಸರ್ಕಾರ ವಿಧಿಸಿದ್ದ ನಿರ್ಬಂಧದಿಂದಾಗಿ ಬಾಧಿತರಾಗಿದ್ದ ಸಮಾಜ ವಿವಿಧ ವರ್ಗದವರಿಗೆ ಮುಖ್ಯಮಂತ್ರಿಯವರು 2021ರ ಜೂನ್ 3 ರಂದು ವಿಶೇಷ ಪರಿಹಾರದ ಎರಡನೇ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದರು. ಇದರಲ್ಲಿ ಚಲನಚಿತ್ರೋದ್ಯಮ ಹಾಗೂ ಕಿರುತೆರೆ ಮಾಧ್ಯಮದಲ್ಲಿ ತೊಡಗಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ತಲಾ ಮೂರು ಸಾವಿರ ರೂ. ಪರಿಹಾರ ನೀಡಲು ಸರ್ಕಾರವು ನಿರ್ಧರಿಸಿತ್ತು.
ಸರ್ಕಾರದ ಈ ನಿರ್ಧಾರದಿಂದಾಗಿ 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಅಂದಾಜು ಆರು ಕೋಟಿ ಅರವತ್ತು ಲಕ್ಷ ರೂ. ಮೀಸಲಿರಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ತಿಳಿಸಿದ್ದಾರೆ.
ಚಲನಚಿತ್ರ ರಂಗದವರು ಮತ್ತು ಕಿರುತೆರೆ ರಂಗದವರಿಗೆ ಆರ್ಥಿಕ ನೆರವನ್ನು ಆಧಾರ್ ಕಾರ್ಡ್ ಸಂಖ್ಯೆಯನ್ನಾಧರಿಸಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಅರ್ಹ ಫಲಾನುಭವಿಗಳು ಸೇವಾಸಿಂಧು ವೆಬ್ ಪೋರ್ಟಲ್ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ನಮೂನೆ ಮತ್ತು ಇನ್ನಿತರೆ ಷರತ್ತುಗಳಿಗಾಗಿ www.sevasindhu.karnataka.gov.in ನಲ್ಲಿ ಪಡೆದುಕೊಳ್ಳಬಹುದು.