ಬೆಂಗಳೂರು:ಇಲ್ಲಿನ ತಾಜ್ವೆಸ್ಟ್ಎಂಡ್ ಹೋಟೆಲ್ನಲ್ಲಿ ಬೆಳಗ್ಗೆಯಿಂದ ನಡೆದ ವಿಪಕ್ಷಗಳ ಸಭೆ ಮುಕ್ತಾಯವಾಗಿದ್ದು, ಸುಮಾರು ನಾಲ್ಕು ತಾಸುಗಳ ಸುದೀರ್ಘ ಸಭೆ ನಡೆಯಿತು. 26 ವಿವಿಧ ಪಕ್ಷಗಳ ನಾಯಕರು ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದರು. ಮಹಾಗಠಬಂಧನಕ್ಕೆ "ಇಂಡಿಯಾ" ಎಂದು ನಾಮಕರಣ ಮಾಡಲಾಗಿದೆ ಎಂದು ವರದಿಯಾಗಿದ್ದರೆ, ಇನ್ನು ಕೆಲವೇ ನಿಮಿಷಗಳಲ್ಲಿ ವಿಪಕ್ಷ ನಾಯಕರಿಂದ ಜಂಟಿ ಸುದ್ದಿಗೋಷ್ಠಿ ನಡೆಯಲಿದೆ.
ಬೆಳಗ್ಗೆಯಿಂದ ನಡೆದ ವಿಪಕ್ಷಗಳ ಸಭೆಯ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಟ್ವೀಟ್ ಮಾಡಿದ್ದು, 26 ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಲು ಮುಂದಾಗಿರುವುದು ಸಂತಸ ತಂದಿದೆ. ಇಲ್ಲಿ ಒಟ್ಟಾಗಿರುವ ಪಕ್ಷಗಳು 11 ರಾಜ್ಯಗಳಲ್ಲಿ ಆಡಳಿತದ್ದಲ್ಲಿದ್ದೇವೆ. ಅಧಿಕಾರದಲ್ಲಿರುವ ಎನ್ಡಿಎ ಭಾಗವಾಗಿರುವ ಬಿಜೆಪಿಗೆ 303 ಸ್ಥಾನಗಳು ಮಾತ್ರ ಗೆದ್ದಿದೆ. ಅದು ತನ್ನ ಮಿತ್ರಪಕ್ಷಗಳನ್ನು ಅಧಿಕಾರಕ್ಕಾಗಿ ಬಳಸಿಕೊಂಡಿತು. ಬಳಿಕ ಕೈಬಿಟ್ಟಿತ್ತು. ಈಗ ಮತ್ತೆ ಹಳೆಯ ಮಿತ್ರರನ್ನು ಸೇರಿಸಿಕೊಳ್ಳಲು ಬಿಜೆಪಿ ಅಧ್ಯಕ್ಷರು ಮತ್ತು ಅದರ ನಾಯಕರು ರಾಜ್ಯದಿಂದ ರಾಜ್ಯಕ್ಕೆ ಓಡಾಡುತ್ತಿದ್ದಾರೆ. ನಮ್ಮ ಒಗ್ಗಟ್ಟು ಕಂಡು ಅವರು ಭಯಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲಾಗುವ ಭೀತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಜಿ ಸಂಸದ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಶಿವಸೇನೆ-ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಅಖಿಲೇಶ್ ಯಾದವ್, ಸಿಪಿಐ - ಎಂ ನಾಯಕ ಸೀತಾರಾಮ್ ಯೆಚೂರಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ನಾಯಕರಿಂದ ಶಕ್ತಿ ಪ್ರದರ್ಶನ:ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಡೆದ ಸಭೆಯಲ್ಲಿ ಮೋದಿ ವಿರೋಧಿ ಬಣದ ವಿಪಕ್ಷಗಳು ಶಕ್ತಿ ಪ್ರದರ್ಶನ ನಡೆಸಿದರು. ಲೋಕಸಭೆ ಚುನಾವಣೆಗಾಗಿ ಕಾರ್ಯತಂತ್ರ, ಮೈತ್ರಿಕೂಟಕ್ಕೆ ಹೊಸ ಹೆಸರು, ಮೈತ್ರಿ ಶಕ್ತಿ ಮೂಲಕ ಬಿಜೆಪಿ ವಿರುದ್ಧ ಹೋರಾಟದ ಬಗ್ಗೆ ತೀರ್ಮಾನ, ತನಿಖಾ ಏಜೆನ್ಸಿಗಳ ಮೂಲಕ ವಿಪಕ್ಷಗಳ ಮೇಲಿನ ದಾಳಿಗೆ ಒಗ್ಗಟ್ಟಾಗಿ ಹೋರಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.