ಬೆಂಗಳೂರು:ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಬದುಕನ್ನ ಇನ್ನಷ್ಟು ಅಭದ್ರಗೊಳಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿರುವ ಅವರು, ಗೌರವಧನ ಹೆಚ್ಚಿಸಿ, ಸೇವಾ ಸೌಲಭ್ಯ ಒದಗಿಸಿ ಅತಿಥಿ ಉಪನ್ಯಾಸಕರ ಬದುಕಿಗೆ ನೆರವಾಗಬೇಕಾಗಿದ್ದ ರಾಜ್ಯ ಬಿಜೆಪಿ ಸರ್ಕಾರ ತನ್ನ ತಂತ್ರ-ಕುತಂತ್ರದ ಕ್ರಮಗಳ ಮೂಲಕ ಅವರ ಬದುಕನ್ನು ಇನ್ನಷ್ಟು ಅಭದ್ರಗೊಳಿಸಿ ವಿಶ್ವಾಸದ್ರೋಹ ಎಸಗಿದೆ ಎಂದಿದ್ದಾರೆ.
ಅತಿಥಿ ಉಪನ್ಯಾಸಕರ 8 ಗಂಟೆಯ ತರಗತಿಗಳಿಗೆ ನೀಡುತ್ತಿದ್ದ 11-12 ಸಾವಿರ ಗೌರವಧನವನ್ನು ರೂ.30-32 ಸಾವಿರಕ್ಕೆ ಹೆಚ್ಚಿಸಿರುವ ಬಿಜೆಪಿ ಸರ್ಕಾರ, ಅವರ ತರಗತಿಗಳ ಅವಧಿಯನ್ನು 8 ಗಂಟೆಯಿಂದ 16 ಗಂಟೆಗೆ ಹೆಚ್ಚಿಸಿ ಒಂದು ಕೈಯಲ್ಲಿ ಕೊಟ್ಟಿರುವುದನ್ನು ಇನ್ನೊಂದು ಕೈಯಿಂದ ಕಿತ್ತುಕೊಂಡಿದೆ ಎಂದು ದೂರಿದ್ದಾರೆ.
ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸುವ ಜೊತೆಯಲ್ಲಿ ಅವರ ತರಗತಿಗಳ ಅವಧಿಯನ್ನು ಹೆಚ್ಚಿಸಿ ಅರ್ಧದಷ್ಟು ಅತಿಥಿ ಉಪನ್ಯಾಸಕರನ್ನು ಮನೆಗೆ ಕಳಿಸಲು ಹೊರಟಿರುವುದು ಸ್ಪಷ್ಟವಾಗಿದೆ. ಇದು ನಿರಂತರ ಶೋಷಿತ ಅತಿಥಿ ಉಪನ್ಯಾಸಕರಿಗೆ ಬಗೆದಿರುವ ದ್ರೋಹವಾಗಿದೆ. ಕಾರ್ಯಭಾರವನ್ನು ದುಪ್ಪಟ್ಟುಗೊಳಿಸುವ ನಿರ್ಧಾರದಿಂದಾಗಿ ಸುಮಾರು 14-15 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕಾತಿಯ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿರುವುದು ಈ ಅನುಮಾನವನ್ನು ಬಲಪಡಿಸಿದೆ ಎಂದಿದ್ದಾರೆ.
ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಿರುವ ಬಿಜೆಪಿ ಸರ್ಕಾರ, ಅವರ ಕಾರ್ಯಭಾರದ ಎಂಟು ಗಂಟೆಯ ಅವಧಿಯನ್ನು ಹಿಂದಿನಂತೆಯೇ ಉಳಿಸಬೇಕು. ಈಗಾಗಲೇ ನಿವೃತ್ತಿಗೆ ಸಮೀಪ ಇರುವ ಅತಿಥಿ ಉಪನ್ಯಾಸಕರೂ ಸೇರಿದಂತೆ ಎಲ್ಲರಿಗೂ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿಂದು 34,047 ಮಂದಿಗೆ ಕೊರೊನಾ, ಸೋಂಕಿನಿಂದ 13 ಸಾವು: ಪಾಸಿಟಿವಿಟಿ ರೇಟ್ ಶೇ.19..!