ಕರ್ನಾಟಕ

karnataka

ETV Bharat / state

ಸರ್ಕಾರದ ಎಡಬಿಡಂಗಿತನಕ್ಕೆ ಮಕ್ಕಳು, ಪೋಷಕರು, ಖಾಸಗಿ ಶಾಲಾ ಆಡಳಿತ ಮಂಡಳಿ ಬೀದಿಗೆ: ಸಿದ್ದರಾಮಯ್ಯ

ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿನ ಈಗಿನ ಬಿಕ್ಕಟ್ಟಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ನೇರ ಹೊಣೆಗಾರರು ಎಂದು ಟ್ವೀಟ್ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ..

Siddaramaiah
ಸಿದ್ದರಾಮಯ್ಯ

By

Published : Dec 20, 2020, 2:02 PM IST

ಬೆಂಗಳೂರು :ರಾಜ್ಯ ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ರಾಜ್ಯದ ವಿದ್ಯಾರ್ಥಿಗಳು, ಪೋಷಕರು ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಎಲ್ಲರೂ ಬೀದಿಗಿಳಿಯುವಂತಾಗಿದೆ. ಈ ಗೊಂದಲದಿಂದಾಗಿ ಬಹಳ ಮುಖ್ಯವಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಸ್ಪಷ್ಟ ನಿರ್ಧಾರ ಕೈಗೊಂಡು ಈ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಸಂಬಂಧ ಟ್ವೀಟ್ ಹಾಗೂ ಮಾಧ್ಯಮ‌ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿನ ಈಗಿನ ಬಿಕ್ಕಟ್ಟಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ನೇರ ಹೊಣೆಗಾರರು. ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ಜಗಳ ತಂದು ಹಾಕಿ ಇವರು ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣವೂ ಇಲ್ಲ. ತರಗತಿಗಳು ನಡೆಯದೆ ಇದ್ದರೂ ಖಾಸಗಿ ಶಾಲೆಗಳು ಪೋಷಕರಿಂದ ನಿಗದಿತ ಪೂರ್ಣಶುಲ್ಕ ಪಾವತಿಸಲು ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಖಾಸಗಿ ಶಾಲೆಗಳು ಆನ್​ಲೈನ್ ತರಗತಿಗಳನ್ನು ಕೂಡ ಸ್ಥಗಿತಗೊಳಿಸಿ ಪೋಷಕರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಶಿಕ್ಷಣ ಸಚಿವರು ಕಣ್ಣುಮುಚ್ಚಿಕೊಂಡು ಕೂತಿದ್ದಾರೆ ಅಂತಾ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.

ಶಾಲೆಗಳಲ್ಲಿ ತರಗತಿಗಳು ನಡೆಯದೆ ಇದ್ದರೂ ಬೋಧನಾ ಶುಲ್ಕದ ಜೊತೆಯಲ್ಲಿ ಪ್ರಯೋಗ ಶಾಲೆ, ಲೈಬ್ರರಿ ಮತ್ತು ಪಠ್ಯೇತರ ಶುಲ್ಕ ವಸೂಲಿ ಮಾಡಲು ಹೊರಟಿರುವ ಖಾಸಗಿ ಶಾಲೆಗಳು ಸರ್ಕಾರದ ಪೊಳ್ಳು ಬೆದರಿಕೆಗೆ ಜಗ್ಗುತ್ತಿಲ್ಲ. ಸರ್ಕಾರ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಜೊತೆ ಶಾಮೀಲಾಗಿರುವಂತಿದೆ. ಶಾಲೆಗಳ ಪುನಾರಂಭದ ಬಗ್ಗೆ ಸಭೆಗಳ ಮೇಲೆ ಸಭೆಗಳು ನಡೆಯುತ್ತಿವೆ.

ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳು ದಿನಕ್ಕೊಂದು ಹೇಳಿಕೆ ನೀಡಿ ಪೋಷಕರನ್ನು ಗೊಂದಲಕ್ಕೆ ನೂಕಿದ್ದಾರೆ. ತಕ್ಷಣ ಶಿಕ್ಷಣ ಸಚಿವರು ಖಾಸಗಿ ಶಾಲೆಗಳ ಮಾಲೀಕರು ಮತ್ತು ಪೋಷಕರ ಸಭೆ ಕರೆದು ಪಾರದರ್ಶಕವಾಗಿ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details