ಬೆಂಗಳೂರು: ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಎನ್ಐಎ ತಂಡ ಬಳ್ಳಾರಿ ಸೇರಿದಂತೆ ಹಲವೆಡೆ ಶೋಧ ನಡೆಸಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ಚಟುವಟಿಕೆಗಳು ಆರಂಭವಾಗಿವೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಫ್ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಸಿದ್ದರಾಮಯ್ಯ ಪಿಎಫ್‌ಐ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮೇಲಿದ್ದ ಕೇಸ್ಗಳನ್ನು ವಾಪಸ್ ಪಡೆದಿದ್ದರು. ಐಸಿಸ್ ಸೇರಿದಂತೆ ಉಗ್ರ ಸಂಘಟನೆಗಳಿಗೆ ಸಪೋರ್ಟ್ ಮಾಡೋರು ಬೆಳೆಯುತ್ತಿದ್ದಾರೆ ಎಂದು ದೂರಿದರು.
ಬೆಳಗಾವಿಯಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ವಿರೋಧ ಪಕ್ಷಗಳು ಭೇಟಿ ಬಳಿಕ ಪರಿಹಾರ ಘೋಷಣೆ ಮಾಡಿದರು. ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ವಿದ್ಯಾರ್ಥಿಗಳನ್ನು ಶಾಲೆಯ ಶೌಚ ಗುಂಡಿ ಸ್ವಚ್ಛಗೊಳಿಸಲು ಇಳಿಸಿದ್ದು ಸರಿಯಲ್ಲ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡದ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಖಜಾನೆಯಲ್ಲಿ ಹಣವೇ ಇಲ್ಲ. ಗ್ಯಾರಂಟಿ ಯೋಜನೆಗಳಿಗಾಗಿ ಎಲ್ಲರಿಗೂ ಉಚಿತ, ಉಚಿತ ಎಂದು ಡಂಗೂರ ಹೊಡೆದ ಸರ್ಕಾರ ವಾಸ್ತವವಾಗಿ ಗ್ಯಾರಂಟಿ ಯೋಜನೆಯನ್ನು ಜನರಿಗೆ ತಲುಪಿಸಲು ವಿಫಲವಾಗಿದೆ ಎಂದರು.
ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಬಂದ ನಂತರ ಇವರು ಬರ ಪರಿಹಾರ ಘೋಷಣೆ ಮಾಡಿದರು. ಅಲ್ಲಿವರೆಗೂ ಯಾರಿಗೂ ಒಂದೇ ಒಂದು ಪೈಸೆ ಹಣ ಬಿಡುಗಡೆ ಮಾಡಲಿಲ್ಲ. ಇಂದು ಶಾಲಾ ಮಕ್ಕಳು ಜೆಸಿಬಿಯಲ್ಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಯಾವಾಗ ಪರಿಹಾರ ಕೊಡಬೇಕೋ ಆಗ ಕೊಡುತ್ತದೆ. ಎಲ್ಲದಕ್ಕೂ ಕೇಂದ್ರವನ್ನೇ ನೆಚ್ಚಿಕೊಳ್ಳುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರ ಮೊದಲು ತನ್ನ ಬಳಿ ಇರುವ ಹಣ ಖರ್ಚು ಮಾಡಲಿ. ಕೇಂದ್ರ ಸರ್ಕಾರ ಖಂಡಿತವಾಗಿಯೂ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಹೇಳಿದರು.
ಇನ್ನು ರೈತರಿಗೆ ಎರಡು ಸಾವಿರ ರೂ ಘೋಷಣೆ ಮಾಡಲಾಗಿದೆ. ಆದರೆ, ಹಣ ಇನ್ನೂ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ. ಬರ ಅಧ್ಯಯನ ತಂಡ ನೀಡುವ ವರದಿ ಆಧಾರದ ಮೇಲೆ ಕೇಂದ್ರವೂ ಪರಿಹಾರ ಬಿಡುಗಡೆ ಮಾಡಲಿದೆ. ಆದರೆ, ಅದಕ್ಕಾಗಿ ಕಾದ ನಮ್ಮ ರೈತರಿಗೆ ಮೋಸ ಮಾಡದೆ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆಗೆ ಹೆಚ್ಚು ಅವಕಾಶ ಕೊಟ್ಟಿದ್ದೇವೆ. ಜಮೀರ್ ಅಹ್ಮದ್ ಖಾನ್, ಡಿ.ಕೆ.ಶಿವಕುಮಾರ್ ಪ್ರಕರಣ ಕಾನೂನು ಸುವ್ಯವಸ್ಥೆ ಅಜೆಂಡಾದಲ್ಲಿತ್ತು. ಆದರೆ, ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಉಚಿತ ಎಂದು ಘೋಷಣೆ ಮಾಡಿ ಅದನ್ನು ಕೊಟ್ಟಿಲ್ಲ. ಉಚಿತ ಕೊಡುಗೆಗೆ ಹಣ ಹೊಂದಾಣಿಕೆ ಮಾಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಜನರ ಮೇಲೆ ತೆರಿಗೆ ಹೊರೆ ಹಾಕಲಾಗಿದೆ. ರೈತರಿಗೆ ಬರ ಪರಿಹಾರ ನೀಡುತ್ತಿಲ್ಲ. ಈ ಸರ್ಕಾರ ಶೇ.100 ರಷ್ಟು ದಿವಾಳಿಯಾಗಿದೆ ಎಂದು ಕಿಡಿಕಾರಿದರು.
ನಾವು ಸರ್ಕಾರ ಬೀಳಿಸಲ್ಲ: ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಸರ್ಕಾರವನ್ನು ನಾವು ಪತನ ಮಾಡುವುದಿಲ್ಲ. ತಾನೇ ತಾನಾಗಿ ಸರ್ಕಾರ ಬೀಳುತ್ತದೆ. ರಾಜಕಾರಣದಲ್ಲಿ ಎಲ್ಲ ಪಕ್ಷಗಳಲ್ಲಿ ಗೊಂದಲ ಸಹಜ. ಕಾಂಗ್ರೆಸ್ನಲ್ಲೂ ಗೊಂದಲವಿದೆ. ನಾವು ಸರ್ಕಾರವನ್ನು ಬೀಳಿಸುತ್ತಿಲ್ಲ. ತಾನೇ ತಾನಾಗಿ ಸರ್ಕಾರ ಬೀಳುತ್ತದೆ. ಕಾಂಗ್ರೆಸ್ನಲ್ಲೂ ಅಜಿತ್ ಪವಾರ್ ನಂಥವರೂ ಇದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಅಭ್ಯರ್ಥಿ ಎಂದು ಇಂಡಿಯಾ ಒಕ್ಕೂಟ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ರಾಹುಲ್ ಗಾಂಧಿಯವರು ಜೀರೋ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಪಿಎಂ ಅಭ್ಯರ್ಥಿ ಆದ ತಕ್ಷಣ ದಲಿತ ವೋಟ್ ವಿಭಜನೆ ಆಗಲ್ಲ. ಪ್ರಧಾನಿ ಯಾರಾಗಬೇಕು ಅನ್ನೋದು ಜಾತಿ ಮೇಲೆ ನಿರ್ಧಾರ ಆಗಲ್ಲ. ಒಳ್ಳೆಯವರು ಆಗಬೇಕು ಅನ್ನೋದು ಅಷ್ಟೇ ಚರ್ಚೆಗೆ ಬರುವುದು. ನಮಗೆ ದಲಿತರ ವೋಟ್ ವಿಭಜನೆ ಭಯ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ:ಉತ್ತರ ಕರ್ನಾಟಕ ಕುರಿತ 3 ದಿನಗಳ ಚರ್ಚೆಯನ್ನು ಸರ್ಕಾರ ಮಣ್ಣುಪಾಲು ಮಾಡಿದೆ: ಆರ್.ಅಶೋಕ್