ಮಕ್ಕಳಿಂದ ಶೌಚಾಲಯ ಸ್ವಚ್ಛತೆ: ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎಂದ ಆರ್.ಅಶೋಕ್ ಬೆಂಗಳೂರು: ಯಶವಂತಪುರ ಕ್ಷೇತ್ರದ ಅಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳ ಕೈಯಿಂದಲೇ ಶೌಚಾಲಯ ಕ್ಲೀನ್ ಮಾಡಿಸಿಕೊಂಡ ಶಿಕ್ಷಕರ ವಿರುದ್ಧ ಕಿಡಿಕಾರಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಸ್ಕೆಟ್ ಚಾಕೊಲೆಟ್ ಕೊಟ್ಟು ಮಕ್ಕಳ ಕೈಯಲ್ಲಿ ಶೌಚಾಲಯ ಕ್ಲೀನ್ ಮಾಡಿಸಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರದ ಮಾಲೂರಿನಲ್ಲಿ ಇತ್ತೀಚೆಗೆ ನಡೆದ ಘಟನೆ ಮಾಸುವ ಮುನ್ನವೇ ರಾಜ್ಯ ರಾಜಧಾನಿಯಲ್ಲಿ ಅಂತಹದ್ದೇ ಘಟನೆ ಬೆಳಕಿಗೆ ಬಂದಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರೀತಿಯಲ್ಲಿಯೇ ಇಂದು ಅಂದ್ರಹಳ್ಳಿ ಸರ್ಕಾರಿ ಶಾಲೆಗೂ ಭೇಟಿ ನೀಡಿದ ಆರ್.ಅಶೋಕ್ ಪರಿಶೀಲಿಸಿದರು. ವಿದ್ಯಾರ್ಥಿಗಳಿಂದ, ಪೋಷಕರಿಂದ ಮಾಹಿತಿ ಪಡೆದುಕೊಂಡರು. ಶಿಕ್ಷಕರ ಜೊತೆಯಲ್ಲಿಯೂ ಚರ್ಚಿಸಿದರು. ಘಟನೆಗೆ ಅತೀವ ಬೇಸರ ವ್ಯಕ್ತಪಡಿಸಿ, ತಪ್ಪಿತಸ್ಥ ಶಿಕ್ಷಕರು ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಚಾಕೊಲೆಟ್ ಮತ್ತು ಬಿಸ್ಕೆಟ್ ಕೊಟ್ಟು ಶೌಚಾಲಯ ಸ್ವಚ್ಛ ಮಾಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮೊನ್ನೆ ಕೋಲಾರದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಈ ಶಾಲೆಯಲ್ಲಿ 600 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಬಡ ಮಕ್ಕಳೇ ಹೆಚ್ಚಿದ್ದಾರೆ. ಡಿಎಸ್ಪಿ, ಮುಖ್ಯ ಶಿಕ್ಷಕರು ಮತ್ತು ಸ್ಥಳೀಯರ ಜೊತೆ ಮಾತನಾಡಿದ್ದೇನೆ" ಎಂದು ಹೇಳಿದರು.
"ನಮ್ಮ ಬಿಇಒ ಹೇಳುವ ಪ್ರಕಾರ ಸ್ವಚ್ಛತೆ ಕಾಪಾಡಲು 32 ಸಾವಿರ ಹಣ ಕೊಡುತ್ತಿದ್ದರು. ಆದರೆ ಅದರ ದಾಖಲಾತಿ ಇಲ್ಲ. ಮಕ್ಕಳಿಗೆ ಚಾಕೊಲೆಟ್ ಆಸೆ ತೋರಿಸಿ ಶೌಚಾಲಯ ಕ್ಲೀನ್ ಮಾಡಿಸಿದ್ದಾರೆಂದು ಮಕ್ಕಳೇ ಹೇಳಿದ್ದಾರೆ. ಮಕ್ಕಳಿಗೆ ಯಾವುದೇ ಸುರಕ್ಷತಾ ಕವಚ ಕೊಡದೆ ಆ್ಯಸಿಡ್ ಕೊಟ್ಟು ಕ್ಲೀನ್ ಮಾಡಿಸಿದ್ದಾರೆ. ಇದೆಲ್ಲಾ ಕಾಂಗ್ರೆಸ್ ಕಾಲದಲ್ಲಿ ನಡೆಯುತ್ತಿದೆ. ಸರ್ಕಾರ ತಡೆಯುವ ಪ್ರಯತ್ನ ಮಾಡದೆ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ" ಎಂದು ಆರೋಪಿಸಿದ್ದಾರೆ.
ಸ್ಥಳೀಯ ಶಾಸಕ ಎಸ್.ಟಿ.ಸೋಮಶೇಖರ್ ಕೂಡ ಪ್ರತಿಪಕ್ಷ ನಾಯಕ ಆರ್.ಅಶೋಕ್ ಜೊತೆ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. "ಏನು ನಡೆಯಬಾರದೋ ಅದು ನಡೆದಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ನಾಳೆ ಮತ್ತೆ ಶಾಲೆಗೆ ಬಂದು ಏನು ತೊಂದರೆ ಇದೆ ಎಂದು ಕೇಳಿ ಪರಿಹಾರ ಕೊಡುವ ಕೆಲಸ ಮಾಡುತ್ತೇನೆ. ಇಲ್ಲಿ ಯಾವ ಅನುದಾನದ ಕೊರತೆ ಇಲ್ಲ. ಬಂದಿರುವ ಅನುದಾನ ಬಳಕೆ ಮಾಡಿಕೊಂಡಿಲ್ಲ" ಎಂದು ಎಸ್.ಟಿ.ಸೋಮಶೇಖರ್ ದೂರಿದರು.
ಇದನ್ನೂ ಓದಿ:ಬೆಂಗಳೂರು: ಮಕ್ಕಳಿಂದಲೇ ಶೌಚಾಲಯ ಸ್ವಚ್ಛಗೊಳಿಸಿದ ಶಾಲಾ ಸಿಬ್ಬಂದಿ, ಪೋಷಕರ ಆಕ್ರೋಶ
ಮುಖ್ಯ ಶಿಕ್ಷಕಿ ಅಮಾನತು:ವಿದ್ಯಾರ್ಥಿಗಳ ಪೋಷಕರು ಇಂದು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿ, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಶಿಕ್ಷಕಿಯನ್ನು ಅಮಾನತು ಮಾಡಿ ಆದೇಶ ಹೊರಡಿಸುವಂತೆ ಡಿಡಿಪಿಐಗೆ ಸೂಚಿಸಿದ್ದರು. ಅದರಂತೆ ಬೆಂಗಳೂರು ಉತ್ತರ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ಅಂಜನಪ್ಪ ಸ್ಥಳ ಪರಿಶೀಲನೆ ನಡೆಸಿ, ತಪ್ಪಿತಸ್ಥ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.