ಕರ್ನಾಟಕ

karnataka

By

Published : Oct 23, 2020, 5:37 PM IST

ETV Bharat / state

ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯ: ಹೈಕೋರ್ಟ್​ನಿಂದ ಮಧ್ಯಂತರ ತಡೆ

ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಕೋರ್ಸ್ ಬಳಿಕ ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

Highcourt
Highcourt

ಬೆಂಗಳೂರು:ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಕೋರ್ಸ್ ಬಳಿಕ ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಮಧ್ಯಂತರ ತಡೆ ನೀಡಿರುವ ಹೈಕೋರ್ಟ್, ವಿದ್ಯಾರ್ಥಿಗಳಿಗೆ ಒತ್ತಾಯಿಸದಂತೆ ಸೂಚಿಸಿದೆ.

ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಾದ ಡಾ. ಎಮ್ .ಎನ್. ಸಾಧ್ವಿನಿ ಮತ್ತಿತರರು ಗ್ರಾಮೀಣ ಸೇವೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2020ರ ಜುಲೈ 23ರಂದು ಹೊರಡಿಸಿರುವ ಆದೇಶ ಹಾಗೂ ಅದನ್ನು ಮಾನ್ಯ ಮಾಡಿರುವ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಪೀಠ ತಡೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮ್ಯಾನೇಜ್ಮೆಂಟ್ ಕೋಟಾದಡಿ ಸೀಟು ಪಡೆದಿರುವ ವಿದ್ಯಾರ್ಥಿಗಳು ಲಕ್ಷಾಂತರ ರೂ.ಗಳಷ್ಟು ಫೀಸು ಕೊಟ್ಟಿರುತ್ತಾರೆ. ಕೆಲವರು ಕೋಟಿ ರೂಪಾಯಿಗೂ ಹೆಚ್ಚು ನೀಡಿರುತ್ತಾರೆ. ಇಂತಹ ವಿದ್ಯಾರ್ಥಿಗಳು ಗ್ರಾಮೀಣ ಸೇವೆ ಸಲ್ಲಿಸಬೇಕು ಎಂದು ಆದೇಶಿಸುವುದು ಸರಿಯಲ್ಲ ಎಂದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಮ್ಯಾನೇಜ್ಮೆಂಟ್ ಕೋಟಾದಡಿ ಬಂದವರೇನು ಆಕಾಶದಿಂದ ಇಳಿದು ಬಂದಿದ್ದಾರಾ. ಕೊರೊನಾ ಸಂದರ್ಭದಲ್ಲಿ ಎಲ್ಲಾ ವೈದ್ಯರೂ ಸೇವೆ ಸಲ್ಲಿಸಬೇಕು ಎಂದು ಸರ್ಕಾರ ಹೇಳಿದರೆ ತಪ್ಪೇನಿದೆ. ಹೆಚ್ಚು ಶುಲ್ಕ ನೀಡಿದವರು ಗ್ರಾಮೀಣ ಸೇವೆ ಮಾಡಬಾರದೆ. ಒಂದು ವರ್ಷ ಸೇವೆ ಸಲ್ಲಿಸುವುದು ಅಷ್ಟು ಕಷ್ಟವೇ ಎಂದು ಕಟುವಾಗಿ ಪ್ರಶ್ನಿಸಿತು.

ಬಳಿಕ, ವಿದ್ಯಾರ್ಥಿಗಳಿಗೆ ಒತ್ತಾಯಿಸಬಾರದು ಎಂದು ನ. 11ರವರೆಗೆ ಮಧ್ಯಂತರ ತಡೆ ನೀಡಿದ ಪೀಠ, ಅರ್ಜಿ ಸಂಬಂಧ ಸರ್ಕಾರದ ಪರ ಅಡ್ವೊಕೇಟ್ ಜನರಲ್ ವಾದಿಸುವುದು ಹೆಚ್ಚು ಸೂಕ್ತ ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ABOUT THE AUTHOR

...view details