ಕರ್ನಾಟಕ

karnataka

ETV Bharat / state

ರೀ ಬೋರ್, ರೀ ಬಾಡಿ ಬಿಲ್ಡ್: ಲಕ ಲಕ ಹೊಳೆಯುತ್ತಿವೆ ಗುಜರಿ ಸೇರಬೇಕಿದ್ದ ಕೆಎಸ್ಆರ್​ಟಿಸಿ ಬಸ್​ಗಳು!

ಗುಜರಿ ಸೇರುತ್ತಿದ್ದ ಕೆಎಸ್​​ಆರ್​ಟಿಸಿ ಬಸ್​ಗಳಿಗೆ ಹೊಸ ಸ್ಪರ್ಶ ನೀಡಿ ಮತ್ತೆ 5 ಲಕ್ಷ ಕಿಲೋಮೀಟರ್​ ಸಂಚಾರಕ್ಕೆ ಬಳಸಿಕೊಳ್ಳಲು ಸಾರಿಗೆ ನಿಗಮ ಮುಂದಾಗಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

By ETV Bharat Karnataka Team

Published : Sep 4, 2023, 8:38 PM IST

Updated : Sep 5, 2023, 1:04 PM IST

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು :ಕೆಎಸ್ಆರ್​ಟಿಸಿ ಗುಜರಿ ಬಸ್​ಗಳು ಲಕ ಲಕ ಹೊಳೆಯುತ್ತಿವೆ. ರೀ ಬೋರ್, ರೀ ಬಾಡಿ ಬಿಲ್ಡ್​ನೊಂದಿಗೆ ಹೊಸ ಬಸ್​ಗಳಂತೆ ಮಾರ್ಪಾಡಾಗಿ ಮತ್ತೆ ರಸ್ತೆಗಿಳಿಯುತ್ತಿವೆ. ಕೇಂದ್ರ ಸರ್ಕಾರದ ಗುಜರಿ ನೀತಿಯನ್ನೇ ಸಮರ್ಪಕವಾಗಿ ಅಳವಡಿಸಿಕೊಂಡ ಕೆಎಸ್ಆರ್​ಟಿಸಿ, ಗುಜರಿ ಸೇರುತ್ತಿದ್ದ ಬಸ್​ಗಳನ್ನೇ ಮತ್ತೆ ಎರಡು ಮೂರು ವರ್ಷ ರಸ್ತೆಗಿಳಿಸುತ್ತಿದೆ. ಹೀಗಾಗಿ ಡಕೋಟ ಬಸ್​ಗಳಿನ್ನು ಹೊಸ ಬಸ್​ಗಳಂತೆ ರೂಪುಗೊಳ್ಳಲಿವೆ.

ಕೆಎಸ್​​ಆರ್​ಟಿಸಿ ಬಸ್​ಗಳಿಗೆ ಹೊಸ ಸ್ಪರ್ಶ

ಹೌದು, 10 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿ ಗುಜರಿ ಸೇರುತ್ತಿದ್ದ ಕೆಎಸ್ಆರ್​ಟಿಸಿ ಬಸ್​ಗಳಿಗೆ ಹೊಸ ಸ್ಪರ್ಶ ನೀಡಿ ಮತ್ತೆ 5 ಲಕ್ಷ ಕಿಲೋಮೀಟರ್ ಸಂಚಾರಕ್ಕೆ ಬಳಸಿಕೊಳ್ಳಲು ಸಾರಿಗೆ ನಿಗಮ ಮುಂದಾಗಿದೆ. ಈಗಾಗಲೇ ಚಾಲನೆಯನ್ನೂ ನೀಡಿದೆ. ಈಗಾಗಲೇ ಸುಮಾರು 15 ಡಿಪೋಗಳು ಮತ್ತು ಎರಡು ಪ್ರಾದೇಶಿಕ ಕಾರ್ಯಾಗಾರದಲ್ಲಿ ನವೀಕರಣ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ವರ್ಕ್‌ಶಾಪ್‌ಗಳು ತಿಂಗಳಿಗೆ 50 ಬಸ್‌ಗಳನ್ನು ಸಂಪೂರ್ಣವಾಗಿ ನವೀಕರಣಗೊಳಿಸುತ್ತಿವೆ.

ಕೆಎಸ್​​ಆರ್​ಟಿಸಿ ಬಸ್​ಗಳಿಗೆ ಹೊಸ ಸ್ಪರ್ಶ ನೀಡುತ್ತಿರುವ ಸಿಬ್ಬಂದಿ

ನವೀಕರಣ ಕಾರ್ಯ : 8-10 ಲಕ್ಷ ಕಿಲೋಮೀಟರ್ ಓಡಿದ ಬಸ್​ಗಳು ಬಹುತೇಕ ಶಿಥಿಲಾವಸ್ಥೆ ತಲುಪಿರುತ್ತವೆ. ತುಕ್ಕು ಹಿಡಿದು ಡಕೋಟಾ ಬಸ್​ಗಳಂತಾಗಿರುತ್ತವೆ. ಬಸ್​ನ ಕವಚ ಹಾನಿಗೊಂಡು ಬಿಡಿಭಾಗಗಳೆಲ್ಲಾ ಸದ್ದು ಮಾಡುತ್ತಿರುತ್ತವೆ. ಇನ್ನೇನು ಗುಜರಿಗೆ ಹಾಕುವುದೊಂದೇ ಬಾಕಿ ಇರುತ್ತದೆ. ಅಂತಹ ಬಸ್​ಗಳನ್ನು ಮೊದಲು ಗುರುತಿಸಲಾಗುತ್ತದೆ. ಗುಜರಿಗೆ ಕೊಂಡೊಯ್ಯಲು ಸಿದ್ದವಾಗಿದ್ದ ಬಸ್​ಗಳನ್ನು ಕೆಎಸ್ಆರ್​ಟಿಸಿಯ ಕಾರ್ಯಾಗಾರಕ್ಕೆ ತರಲಾಗುತ್ತದೆ.

ಕೆಎಸ್​​ಆರ್​ಟಿಸಿ ಬಸ್​ಗಳಿಗೆ ಹೊಸ ಸ್ಪರ್ಶ ನೀಡುತ್ತಿರುವ ಸಿಬ್ಬಂದಿ

ಕಾರ್ಯಾಗಾರಕ್ಕೆ ಡಕೋಟಾ ಬಸ್ ಬರುತ್ತಿದ್ದಂತೆ ಮೊದಲ ಮಾಡುವ ಕೆಲಸ ಬಸ್​ನ ತುಕ್ಕು ಹಿಡಿದ ಮತ್ತು ಹಾನಿಗೊಳಗಾದ ಎಲ್ಲಾ ಭಾಗಗಳನ್ನು ಹೊರತೆಗೆಯುವುದು. ಬಳಿಕ ಬಸ್​ನ ಎಲ್ಲಾ ಭಾಗಗಳನ್ನು ಬಿಚ್ಚಿ ಸಂಪೂರ್ಣವಾಗಿ ವಾಹನವನ್ನು ದುರಸ್ತಿಗೊಳಿಸಲಾಗುತ್ತದೆ. ಇಂಜಿನ್ ಅನ್ನು ಬಿಚ್ಚಿ ರೀ ಬೋರ್ ಮಾಡಲಾಗುತ್ತದೆ. ಚಾಸಿ ದಕ್ಷವಾಗಿರುವಂತೆ ಅಗತ್ಯ ದುರಸ್ತಿ ಕೆಲಸ ಮಾಡಲಾಗುತ್ತದೆ. ವೆಲ್ಡಿಂಗ್, ವೈರಿಂಗ್​ನಿಂದ ಎಲ್ಲ ಕೆಲಸ ಮಾಡಿ ನಂತರವೇ ಮತ್ತೆ ಬಸ್​ನ ಜೋಡಿಸಲಾಗುತ್ತದೆ. ಪ್ಯಾನೆಲಿಂಗ್ ಕೆಲಸ ಮುಗಿಸಿ, ಬಸ್‌ನ ಹೊರಭಾಗಕ್ಕೆ ಹೊಸ ಲೋಹದ ಹಾಳೆಗಳನ್ನು ಬಳಸಲಾಗುತ್ತದೆ.

ಕೆಎಸ್​​ಆರ್​ಟಿಸಿ ಬಸ್​ಗಳಿಗೆ ಹೊಸ ಸ್ಪರ್ಶ ನೀಡುತ್ತಿರುವ ಸಿಬ್ಬಂದಿ

ಕಿಟಕಿಗಳು ಮತ್ತು ವಿಂಡ್‌ಶೀಲ್ಡ್‌ಗಳ ಮೇಲಿನ ಗ್ಲಾಸ್‌ಗಳನ್ನು ಬದಲಾಯಿಸಲಾಗುತ್ತದೆ. ಶೀಟ್ ಕುಶನ್‌ಗಳು ಮತ್ತು ಡ್ರೆಸಿಂಗ್‌ಗಳನ್ನು ಹೊಸ ಕೋಟ್‌ನೊಂದಿಗೆ ಪುನಃ ಮಾಡಲಾಗುತ್ತದೆ. ಆ ಮೂಲಕ ಗುಜರಿ ಬಸ್ ಶೋರೋಂನಿಂದ ಬಂದ ಹೊಸ ಬಸ್​ನ ರೀತಿಯಲ್ಲಿಯೇ ಸಿದ್ದವಾಗುತ್ತದೆ. ಇಂಜಿನ್ ಕ್ಷಮತೆ ಹಾಗೂ ಬಸ್​ನ ಹೊರಕವಚ ದಕ್ಷವಾಗಿದ್ದು, ಹೊಸ ಬಸ್ ಗೂ ನವೀಕರಣಗೊಂಡ ಬಸ್​ಗೂ ವ್ಯತ್ಯಾಸ ಗೊತ್ತಾಗದ ರೀತಿ ಬಸ್ ಸಿದ್ದವಾಗಿ ನಿಂತಿರುತ್ತದೆ.

ಕೆಎಸ್​​ಆರ್​ಟಿಸಿ ಬಸ್​ಗಳಿಗೆ ಹೊಸ ಸ್ಪರ್ಶ ನೀಡುತ್ತಿರುವ ಸಿಬ್ಬಂದಿ

ಕೆಎಸ್​​ಆರ್​​​ಟಿಸಿಯಲ್ಲಿ 8 ಸಾವಿರಕ್ಕೂ ಹೆಚ್ಚು ಬಸ್​​ಗಳು:ಸದ್ಯ ಕೆಎಸ್ಆರ್​ಟಿಸಿ ಬಳಿ 8 ಸಾವಿರಕ್ಕೂ ಹೆಚ್ಚಿನ ಬಸ್​ಗಳಿದ್ದು, ಅದರಲ್ಲಿ ಅಂದಾಜು 2 ಸಾವಿರದಷ್ಟು ಬಸ್​ಗಳು 10 ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿವೆ. ಅದರಲ್ಲಿ ಸದ್ಯ ಗುಜರಿ ಸೇರಬೇಕಿದ್ದ 500ಕ್ಕೂ ಹೆಚ್ಚಿನ ಬಸ್​ಗಳನ್ನು ನವೀಕರಣಗೊಳಿಸಿ ರಸ್ತೆಗಿಳಿಸಲಾಗಿದೆ. ಇನ್ನು 1300 ಬಸ್​ಗಳನ್ನು ನವೀಕರಣಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರದ ಗುಜರಿ ನೀತಿಯ ಪ್ರಕಾರ, 10 ಲಕ್ಷ ಕಿಲೋಮೀಟರ್ ಅಥವಾ 15 ವರ್ಷ ದಾಟಿದ ಬಸ್​ಗಳನ್ನು ರಸ್ತೆಗಿಳಿಸುವಂತಿಲ್ಲ.

ಕೆಎಸ್​​ಆರ್​ಟಿಸಿ ಬಸ್​ಗಳಿಗೆ ಹೊಸ ಸ್ಪರ್ಶ ನೀಡುತ್ತಿರುವ ಸಿಬ್ಬಂದಿ

ಆದರೆ, 10 ವರ್ಷಕ್ಕೆ 10 ಲಕ್ಷ ಕಿಲೋಮೀಟರ್ ದೂರವನ್ನು ಕೆಎಸ್ಆರ್​ಟಿಸಿ ಬಸ್​ಗಳು ಕ್ರಮಿಸುತ್ತಿವೆ. ಹಾಗಾಗಿ 10 ವರ್ಷಕ್ಕೆ ಈ ಬಸ್​ಗಳನ್ನು ಗುಜರಿಗೆ ಹಾಕಲಾಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯ ಸಾರಿಗೆ ಸಂಸ್ಥೆ ಹಳೆ ಬಸ್​ಗಳನ್ನು ಇಂಜಿನ್ ರೀಬೋರ್​ನಿಂದ ಹಿಡಿದು ಸಂಪೂರ್ಣವಾಗಿ ಹೊಸದರಂತೆ ಮಾರ್ಪಡಿಸಿ, 15 ವರ್ಷದ ಮಿತಿಯವರೆಗೂ ಬಸ್​ಗಳನ್ನು ಓಡಿಸಲು ಮಾಸ್ಟರ್ ಪ್ಲಾನ್ ಮಾಡಿ, ಗುಜರಿ ನೀತಿಯ ನಿಯಮ ಉಲ್ಲಂಘನೆಯಾಗದಂತೆ ಬಸ್​ಗಳನ್ನು ಹೆಚ್ಚುವರಿಯಾಗಿ 4-5 ಲಕ್ಷ ಕಿಲೋಮೀಟರ್ ಹಾಗೂ ಮತ್ತೆ ನಾಲ್ಕೈದು ವರ್ಷಗಳ ಕಾಲ ಓಡಿಸಲು ಆರಂಭಿಸಿದೆ.

ಕೆಎಸ್​​ಆರ್​ಟಿಸಿ ಬಸ್​ಗಳಿಗೆ ಹೊಸ ಸ್ಪರ್ಶ ನೀಡಿದ ಸಿಬ್ಬಂದಿ

ಸಚಿವರು ಹೇಳಿದ್ದಿಷ್ಟು:ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹಿಂದೆ ಎಲ್ಲ 7-8 ಲಕ್ಷ ಓಡಿದ ಬಸ್ ಗಳನ್ನು ಸ್ಕ್ರ್ಯಾಪ್​ಗೆ ಹಾಕುತ್ತಿದ್ದರು. ಅದು ನ್ಯಾಷನಲ್ ವೇಸ್ಟ್. ಹೀಗಾಗಿ ಇಂತಹ ಬಸ್​ಗಳನ್ನು ನವೀಕರಿಸುವ ಮೂಲಕ ಮತ್ತೆ 4-5 ಲಕ್ಷ ಕಿಲೋಮೀಟರ್ ಓಡಿಸುವ ಕೆಲಸ ಈಗ ನಮ್ಮಿಂದ ಆಗುತ್ತಿದೆ. ಈಗಾಗಲೇ 500 ಬಸ್ ಗುಜರಿ ಬದಲು ನವೀಕರಣಗೊಂಡು ರಸ್ತೆಗಿಳಿಸಿವೆ. ಹೊಸ್ ಬಸ್​ಗೆ ಕಡಿಮೆ ಇಲ್ಲದಂತೆ ಈ ಬಸ್​ಗಳನ್ನು ರೆಡಿ ಮಾಡಲಾಗುತ್ತದೆ. ಇಂಜಿನ್ ಎಲ್ಲವನ್ನೂ ಬಿಚ್ಚಿ ರೀಬೋರ್ ಮಾಡಿ ದುರಸ್ತಿಪಡಿಸಿ ಹೊಸದಾಗಿ ಸಿದ್ದಪಡಿಸಲಾಗಿದೆ. ಬಸ್​ನ ಹೊರ ಕವಚ ಪೂರ್ತಿ ಹೊಸದಾಗಿ ಕಟ್ಟಲಾಗುತ್ತದೆ. ಹೊಸ ಟೈರ್, ಟೂಬ್ ಹಾಕಲಾಗಿದೆ. ಇಂಜಿನ್ ರೀ ಬೋರ್ ಆಗಲಿದೆ ಎಂದು ಮಾಹಿತಿ ನೀಡಿದರು.

ಕೆಎಸ್​​ಆರ್​ಟಿಸಿ ಬಸ್​ಗಳಿಗೆ ಹೊಸ ಸ್ಪರ್ಶ ನೀಡಿದ ಸಿಬ್ಬಂದಿ ಬಳಗ

ಗುಜರಿಗೆ ಸೇರಬೇಕಾದ ಬಸ್​ನ ನವೀಕರಣ 2-3 ಲಕ್ಷದಲ್ಲಿ ಮುಗಿದು ಹೋಗಲಿದೆ. ಆದರೆ, ನಾವು ಹೊಸ ಬಸ್ ಖರೀದಿಸಬೇಕಾದಲ್ಲಿ40 ಲಕ್ಷ ಆಗಲಿದೆ. ಖಾಸಗಿಯವರು 20-25 ಲಕ್ಷ ಕಿಲೋಮೀಟರ್ ವರೆಗೂ ಓಡಿಸುತ್ತಾರೆ. ನಾವು 8-10 ಲಕ್ಷ ಕಿಲೋ ಮೀಟರ್​​ಗೆ ಸ್ಕ್ರಯಾಪ್​​ಗೆ ಹಾಕುತ್ತಿದ್ದೆವು. ಈಗ ಕೇಂದ್ರ ಕೂಡ 15 ವರ್ಷದ ಮೇಲೆ ಓಡಿಸಬಾರದು ಎನ್ನುವ ಆದೇಶ ಮಾಡಿದೆ. ನಾವು ಕೂಡ ಅಷ್ಟು ವರ್ಷಗಳ ಕಾಲ ಸುವ್ಯವಸ್ಥಿತವಾಗಿರಿಸಿಕೊಂಡು ರೀಫರ್ಮಿಷನ್​ಮೆಂಟ್​ ಮಾಡಿ ಬಸ್ ಓಡಿಸಲಿದ್ದೇವೆ. ಇದರಿಂದ ನಮ್ಮ ಸಂಸ್ಥೆಗೂ ಹಣ ಉಳಿಯಲಿದೆ ಎಂದರು.

ಹೊಸದರಂತೆ ಕಂಗೊಳಿಸುತ್ತಿವೆ ನವೀಕರಣಗೊಂಡ ಬಸ್​:ನವೀಕರಣಗೊಂಡ ಬಸ್​ಗೂ ಹೊಸ ಬಸ್​ಗೂ ಯಾವ ವ್ಯತ್ಯಾಸವೂ ಇರಲ್ಲ. ಹೊಸ ಬಸ್ ತರವೇ ಇರಲಿದೆ. ಅಲ್ಲದೇ ಈ ಬಸ್ ಅನ್ನು ಕಾಶ್ಮೀರಕ್ಕೆ ಕೂಡ ತೆಗೆದುಕೊಂಡು ಹೋಗುವಷ್ಟು ಸದೃಢವಾಗಿವೆ. ಹಾಗಾಗಿ ರಾಜ್ಯದ ಎಲ್ಲ ಕಡೆ ಈ ಬಸ್​ಗಳು ಓಡಾಡಲಿವೆ. ಆದರೂ ಲೋಕಲ್​ನಲ್ಲಿ ಹಳೆಯ ಬಸ್ ಬದಲು ಈ ಬಸ್ ಹಾಕಲಿದ್ದೇವೆ ಎಂದರು.

ಶಕ್ತಿ ಯೋಜನೆಯಿಂದಾಗಿ ಕೆಂಪುಬಣ್ಣದ (ವೇಗಧೂತ) ಬಸ್​ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಉಚಿತ ಪ್ರಯಾಣ ಸೌಲಭ್ಯದ ಕಾರಣಕ್ಕಾಗಿ ಬಹುತೇಕ ಸಾಮಾನ್ಯ ಬಸ್​ಗಳು ಪ್ರಯಾಣಿಕರಿಂದ ತುಂಬಿದ್ದು, ಹೆಚ್ಚುವರಿ ಬಸ್​ಗಳ ವ್ಯವಸ್ಥೆಗೆ ಸಾರಿಗೆ ನಿಗಮ ಪ್ರಯಾಸಪಡುತ್ತಿದೆ. ಇದರ ನಡುವೆ ಗುಜರಿಗೆ ಹಳೆಯ ಬಸ್ ಹಾಕಿದರೆ, ಅದರ ಬದಲಿ ಹೊಸ ಬಸ್​ಗಳ ಖರೀದಿಗೆ ಪ್ರತಿ ಬಸ್ ಗೆ 40 ಲಕ್ಷ ರೂ. ಬೇಕಾಗಲಿದೆ.

ಅಷ್ಟೊಂದು ಮೊತ್ತ ಭರಿಸುವ ಸ್ಥಿತಿಯಲ್ಲಿ ಸದ್ಯ ಕೆಎಸ್ಆರ್​ಟಿಸಿ ಇಲ್ಲ. ಅಲ್ಲದೆ ಸರ್ಕಾರವೂ ಅದಕ್ಕೆ ಒಪ್ಪಿಗೆ ನೀಡುವುದು ಕಷ್ಟ. ಹಾಗಾಗಿ, ಹೊಸ ಬಸ್​ಗಳು ಹಂತ ಹಂತವಾಗಿ ಜೋಡಣೆಯಾಗಲಿದ್ದು, ಅದಕ್ಕೆ ಪೂರಕವಾಗಿ ಗುಜರಿ ಸೇರಬೇಕಾದ ಬಸ್​ಗಳೇ ಹೆಚ್ಚುವರಿಯಾಗಿ ಇನ್ನು ನಾಲ್ಕೈದು ವರ್ಷ ಸೇವೆ ನೀಡಿ ಕೆಎಸ್ಆರ್​ಟಿಸಿ ಮೇಲಿನ ಹೊರೆ ಕಡಿಮೆ ಮಾಡಲಿವೆ. ಇದರಿಂದ ಸಂಸ್ಥೆ ಲಾಭದಾಯಕದತ್ತ ಮರಳಲು ಅನುಕೂಲವಾಗಲಿದೆ ಎನ್ನುವುದು ಸಾರಿಗೆ ಇಲಾಖೆ ಅಧಿಕಾರಿಗಳ ಲೆಕ್ಕಾಚಾರವಾಗಿದೆ.

ಒಟ್ಟಿನಲ್ಲಿ ಗುಜರಿ ಸೇರಬೇಕಿದ್ದ ಕೆಎಸ್ಆರ್​ಟಿಸಿ ಬಸ್​ಗಳು ನವೀಕರಣಗೊಂಡು ಮತ್ತೆ ರಸ್ತೆಗಿಳಿಯುವ ಮೂಲಕ ಶಕ್ತಿ ಯೋಜನೆಗೆ ಮತ್ತಷ್ಟು ಬಲ ನೀಡಲಿದ್ದು, ಆರ್ಥಿಕವಾಗಿಯೂ ಸಾರಿಗೆ ನಿಗಮಕ್ಕೆ ಶಕ್ತಿ ತುಂಬಲಿದೆ.

ಇದನ್ನೂ ಓದಿ :ಕೆಎಸ್ಆರ್​ಟಿಸಿಗೆ ಮುಡಿಗೆ ’ಸಪ್ಲೈಚೈನ್ ಲೀಡರ್ ಶಿಪ್​ -ಎಕ್ಸ್​​​​ಪ್ರೆಸ್ ಲಾಜಿಸ್ಟಿಕ್ ಪ್ರಶಸ್ತಿ

Last Updated : Sep 5, 2023, 1:04 PM IST

ABOUT THE AUTHOR

...view details