ಬೆಂಗಳೂರು: ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಚಾಲ್ತಿಯಲ್ಲಿರುವ ಪದ್ಧತಿ ಸಂಪ್ರದಾಯಗಳಿಗೆ ವಿರುದ್ಧವಾದ ಆಚರಣೆಯನ್ನು ನಡೆಸುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರ ಮೂಲಕ ಈ ಹೊಸ ಆದೇಶ ಹೊರಡಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಒಳಗಾಗುವ ಎಲ್ಲಾ ಲಕ್ಷಣವನ್ನು ತೋರಿಸುತ್ತಿದೆ. ಏಕೆಂದರೆ ಈ ಆದೇಶದಿಂದಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಹಲವು ಆಚರಣೆಗಳು ನಿಲ್ಲಲಿವೆ. ಆದೇಶದಲ್ಲಿ ಸ್ಪಷ್ಟವಾಗಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾಧಾರಣೆ, ಜಯಂತಿ ಆಚರಣೆ ಸೇರಿದಂತೆ ಚಾಲ್ತಿಯಲ್ಲಿರುವ ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧವಾದ ಆಚರಣೆ ನಡೆಸುವಂತಿಲ್ಲ ಎಂದು ಹೇಳಲಾಗಿದೆ.
ಈಗಾಗಲೇ ರಾಜ್ಯದ ವಿವಿಧ ದೇವಾಲಯಗಳಲ್ಲಿ ಆಯಾ ಪ್ರಾದೇಶಿಕತೆಗೆ ತಕ್ಕಂತೆ ಒಂದಿಷ್ಟು ಮಾರ್ಪಾಡು ಮಾಡಿಕೊಂಡು ವಿವಿಧ ಸಂಪ್ರದಾಯಗಳ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇದೀಗ ಹೊರ ಬಿದ್ದಿರುವ ಸರ್ಕಾರಿ ಆದೇಶ ಈ ಎಲ್ಲ ಆಚರಣೆಗಳಿಗೂ ತಡೆ ಒಡ್ಡಲಿದೆ. ಮುದ್ರಾಧಾರಣೆ ಮಾಡುವುದು, ಜಯಂತಿಗಳನ್ನು ಆಚರಿಸುವುದು ಸೇರಿದಂತೆ ಚಾಲ್ತಿಯಲ್ಲಿರುವ ಸಂಪ್ರದಾಯಗಳ ವಿರುದ್ಧವಾಗಿ ಭಾವಚಿತ್ರ, ವಿಗ್ರಹಗಳನ್ನು ಅಳವಡಿಸುವಂತಿಲ್ಲ ಎಂದು ಆದೇಶ ನೀಡಲಾಗಿದೆ.
ಮುದ್ರಾಧಾರಣೆಗೆ ಸಂಬಂಧಪಟ್ಟಂತೆ ಇರುವ ಸೂಚನೆ ಹಿನ್ನೆಲೆಯಲ್ಲಿ ಈಗ ವೈಷ್ಣವ ಸಂಪ್ರದಾಯದ ಮಾಧ್ವರು ತೀವ್ರ ಆಕ್ರೋಶವನ್ನು ಹೊರಹಾಕಿದ್ದು,ಈ ಕೂಡಲೇ ಆದೇಶವನ್ನು ಹಿಂಪಡೆಯುಂತೆ ಆಗ್ರಹಿಸುತ್ತಿದ್ದಾರೆ. ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಸರ್ಕಾರದ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.