ಬೆಂಗಳೂರು:ಅಖಿಲ ಭಾರತ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡ, ಮಾಜಿ ರಾಜ್ಯಸಭಾ ಸದಸ್ಯ ಒಬೈದುಲ್ಲಾ ಖಾನ್ ಅಜ್ಮಿ ಅವರು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದರು. ಪದ್ಮನಾಭ ನಗರದಲ್ಲಿರುವ ಗೌಡರ ನಿವಾಸದಲ್ಲಿ ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಅಜ್ಮಿ ಅವರು ಜೆಡಿಎಸ್ಗೆ ಸೇರ್ಪಡೆಯಾದರು. ದೇವೇಗೌಡರು ಪಕ್ಷದ ಶಾಲು ಹಾಕಿ ಆತ್ಮೀಯವಾಗಿ ಅವರನ್ನು ಬರ ಮಾಡಿಕೊಂಡರು.
ದೇವೇಗೌಡರು ಹೇಳಿದ್ದೇನು?:ನಂತರ ಮಾತನಾಡಿದ ದೇವೇಗೌಡರು, ''ಒಬೈದುಲ್ಲಾ ಅವರು ನನ್ನ ಹಳೆಯ ಸ್ನೇಹಿತರು. ಅವರು ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಪಕ್ಷದ ಹಿರಿಯ ಉಪಾಧ್ಯಕ್ಷರನ್ನಾಗಿ ಅವರನ್ನು ಆಯ್ಕೆ ಮಾಡಿದ್ದೇವೆ'' ಎಂದು ಹೇಳಿದರು. ''ಪ್ರಚಾರಕ್ಕೆ ಹೋಗುವುದನ್ನು ಕಾದು ನೋಡಿ ಎಂದು ತಮಾಷೆ ಮಾಡಿದ ಗೌಡರು, ನಾನು ಕದ್ದು ಮುಚ್ಚಿ ಮಾತನಾಡುವುದಿಲ್ಲ. ನನ್ನ ಪಕ್ಷಕ್ಕಾಗಿ ಯುಗಾದಿ ಹಬ್ಬ ಕಳೆದ ನಂತರ, ಮುಖಂಡರ ಜೊತೆ ಸಮಾಲೋಚನೆ ಮಾಡುತ್ತೇನೆ. ನಂತರ ಸುದ್ದಿಗೋಷ್ಠಿ ಮಾಡುತ್ತೇನೆ'' ಎಂದು ತಿಳಿಸಿದರು. ಈ ಸಂಕಷ್ಟ ಕಾಲದಲ್ಲಿ ನಾನು ಇರುತ್ತೇನೆ ಅಂತ ಪಕ್ಷಕ್ಕೆ ಬಂದಿದ್ದಾರೆ. ಅವರದು ಉದಾರವಾದ ಮನಸ್ಸು ಎಂದರು.
ದೇಶ ಒಂದೇ ಎಂಬ ಸಂದೇಶ ನೀಡಿದ್ದು, ಜನತಾ ದಳ: ಪಕ್ಷದ ಸೇರ್ಪಡೆಗೊಂಡ ನಂತರ ಒಬೈದುಲ್ಲಾ ಖಾನ್ ಅವರು ಮಾತನಾಡಿ, ''ನನ್ನ ಬಗ್ಗೆ ನಮ್ಮ ಸರ್ವೋಚ್ಛ ನಾಯಕ ದೇವೇಗೌಡರು ಹಾಗೂ ಸಿ.ಎಂ. ಇಬ್ರಾಹಿಂ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಜನತಾ ದಳದ ಮೂಲ ಉದ್ದೇಶ ಸಾಮಾಜಿಕ ನ್ಯಾಯ. ಜನತಾದಳ ಸರ್ಕಾರ ಕೇಂದ್ರದಲ್ಲಿ ಇದ್ದಾಗ ದೇಶದಲ್ಲಿ ಸಾಮಾಜಿಕ ನ್ಯಾಯ ಉಳಿಲು ಸಾಧ್ಯವಾಯಿತು. ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲರನ್ನು ಒಗ್ಗೂಡಿಸಿ, ದೇಶ ಒಂದೇ ಎಂಬ ಸಂದೇಶ ನೀಡಿದ್ದು ಜನತಾ ದಳ'' ಎಂದರು.