ಬೆಂಗಳೂರು:ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಎಂದೇ ಕುಖ್ಯಾತಿಯಾಗಿರುವ ಕುಣಿಗಲ್ ಗಿರಿಯನ್ನು ಕೋರಮಂಗಲ ಪೊಲೀಸರು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ತಾನು ಅಡಗಿಕೊಂಡಿದ್ದ ಕ್ಲಬ್ನಲ್ಲಿ ದರೋಡೆ ಮಾಡಲು ಸ್ಕೆಚ್ ಹಾಕಿದ್ದ ಎಂಬ ಮಾಹಿತಿ ತನಿಖೆಯಿಂದ ಬಯಲಾಗಿದೆ.
ಕ್ಲಬ್ಗಳಲ್ಲಿ ಪಾರ್ಟಿ ಮಾಡೋದೆ ದರೋಡೆಗಾಗಿ:
ಕೋರಮಂಗಲದಲ್ಲಿರುವ ಕ್ಲಬ್ನಲ್ಲಿ ಕುಣಿಗಲ್ ಗಿರಿ ಹಾಗೂ ಆತನ ಗ್ಯಾಂಗ್ ಇದೆ ಎಂಬ ಖಚಿತ ಮಾಹಿತಿ ಮೇರೆಗೆ ಕೋರಮಂಗಲ ಪೊಲೀಸರು ಸೋಮವಾರ ಕ್ಲಬ್ ಮೇಲೆ ದಾಳಿ ನಡೆಸಿ ಕುಣಿಗಲ್ ಗಿರಿ ಆತನ ಸಹಚರರಾದ ಹೇಮಂತ್, ಭರತ್, ಗಂಗಾಧರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಈ ಕ್ಲಬ್ನಲ್ಲಿ ಡರೋಡೆ ಸಂಚು ರೂಪಿಸಿದ್ದು, ಮಾರಕಾಸ್ತ್ರಗಳನ್ನು ವೊಕ್ಸೊ ವ್ಯಾಗನ್ ಕಾರಿನಲ್ಲಿಟ್ಟು ನಾಲ್ವರು ಕ್ಲಬ್ಗೆ ಬಂದಿದ್ದೆವು . ಸಮಯ ನೋಡಿ ದರೋಡೆಗೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಣಿಗಲ್ ಗಿರಿ ಕ್ಲಬ್ನಲ್ಲಿ ಇರುವ ಮಾಹಿತಿ ಪಡೆದು ಪೊಲೀಸರು ಎದುರಾದಾಗ ತಾನೊಬ್ಬ ಸಮಾಜ ಸೇವಕ, ರಾಜಕೀಯ ಮುಖಂಡರೊಂದಿಗೂ ಗುರುತಿಸಿಕೊಂಡಿದ್ದೇನೆ. ಎಲ್ಲ ಬಿಟ್ಟು ಬಿಟ್ಟಿದ್ದೀನಿ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಬಂದಿದ್ದೆ ಅಷ್ಟೆ ಎಂದು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಗಿರಿ ಕ್ಲಬ್, ಪಬ್ಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡಲು ಮುಂದಾಗಿದ್ದು, ಇದೇ ಮೊದಲೇನಲ್ಲ. 2012ರಲ್ಲಿ ತನ್ನ ಪಟಾಲಂ ಜೊತೆ ಸೇರಿ ನಗರದ ಕಂಟ್ರಿ ಕ್ಲಬ್ನಲ್ಲಿ 7 ಕೋಟಿ ರೂ.ದರೋಡೆ ಮಾಡಿ ಹಣದ ಸಮೇತ ಸಿಕ್ಕಿಬಿದ್ದು 2 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದನು. ಬಳಿಕ 2014 ರಲ್ಲಿ ಸ್ಯಾಟಲೈಟ್ ಕ್ಲಬ್ಗೆ ನುಗ್ಗಿ 30 ಲಕ್ಷ ದರೋಡೆ ಮಾಡಿ ಸಹಚರರೊಂದಿಗೆ ನೆರೆಯ ಆಂಧ್ರದ ಹಿಂದೂಪುರದ ಬಳಿ ಅವಿತು ಕುಳಿತಿದ್ದವನನ್ನ ಪೊಲೀಸರು ಬಂಧಿಸಿ ಕರೆ ತಂದಿದ್ದರು. ಈ ಪ್ರಕರಣದಲ್ಲಿ ಮೂರೂವರೆ ವರ್ಷ ಸಜೆ ಅನುಭವಿಸಿದ್ದ ಗಿರಿ ಕಳೆದ ವರ್ಷವಷ್ಟೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ.
ಅಲ್ಲಿಂದೀಚೆಗೆ ಕೊಂಚ ಸೈಲೆಂಟಾಗಿದ್ದ ಗಿರಿಗೆ ಪರೇಡ್ ನೆಡೆಸಿದ್ದ ಸಿಸಿಬಿ ಪೊಲೀಸರು ಬಾಲ ಬಿಚ್ಚದಂತೆ ವಾರ್ನಿಂಗ್ ನೀಡಿದ್ದರು. ಆದರೂ ಇತ್ತೀಚೆಗೆ ಕೆಲ ವೇಶ್ಯಾವಾಟಿಕೆ ಅಡ್ಡೆಗಳಲ್ಲಿ ಯುವತಿಯರಿಗೆ ಲೈಂಗಿಕ ಪ್ರಚೋದನೆ ನೀಡಿ ಹಿಂಸಿಸುವುದು ಸೇರಿದಂತೆ ಧಮಕಿ ಆರೋಪಗಳು ಈತನ ಮೇಲೆ ಮತ್ತೆ ಕೇಳಿ ಬಂದಿದ್ದವು. ಆದ್ದರಿಂದ ಕಳೆದ ತಿಂಗಳ 16 ರಂದು ರೆಸಿಡೆನ್ಸಿ ರಸ್ತೆಯ ಡ್ಯಾನ್ಸ್ ಬಾರೊಂದರಲ್ಲಿ 266 ಯುವತಿಯರನ್ನ ಕರೆಸಿ ತನ್ನ ಸಹಚರರೊಂದಿಗೆ ಲಕ್ಷುರಿಯಾಗಿ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದಾನೆ ಎಂದು ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ದಾಳಿ ನೆಡೆಸಿದ್ದರು. ಆಗಲೂ ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದ ಗಿರಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು ಮತ್ತೆ ಕಂಬಿ ಹಿಂದೆ ಸೇರಿದ್ದಾನೆ.