ಬೆಂಗಳೂರು: ಆದಾಯ ಸಂಗ್ರಹದ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಸ್ಕೆಟ್, ಆಟೋ ಮೊಬೈಲ್ ಕ್ಷೇತ್ರಕ್ಕೆ ಜಿಎಸ್ಟಿ ಸ್ಲ್ಯಾಬ್ ದರದಲ್ಲಿ ಕಡಿತವಿಲ್ಲ ಎಂದು ಜಿಎಸ್ಟಿ ಸಂಪರ್ಕ ಸಭೆಯ ಬಳಿಕ ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ ತಿಳಿಸಿದರು.
ಕಳೆದ ಕೆಲವು ತಿಂಗಳಿಂದ ತೀವ್ರಗತಿಯ ಮಾರಾಟ ಕುಸಿತ ಕಾಣುತ್ತಿರುವ ವಾಹನೋದ್ಯಮದ ಉದ್ಯಮಿಗಳು, ಮುಂಬರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ಉದ್ಯಮದ ಮೇಲಿನ ತೆರಿಗೆ ಹೊರೆ ತಗ್ಗಿಸುವಂತೆ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದರು. ಜಿಎಸ್ಟಿ ಮಂಡಳಿಯ ಪ್ರಮುಖ ಸದಸ್ಯರಾದ ಸುಶೀಲ್ ಕುಮಾರ್ ಮೋದಿ ತೆರಿಗೆ ಕಡಿತ ಇಲ್ಲವೆಂದು ಹೇಳಿದ್ದಾರೆ. ಈ ಮೂಲಕ ಆಟೋಮೊಬೈಲ್ ಉದ್ಯಮಿಗಳ ನಿರೀಕ್ಷೆ ಹುಸಿಯಾಗಲಿದೆ ಎಂಬುದು ಈ ಮುಖೇನ ಸ್ಪಷ್ಟವಾಗುತ್ತದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಡಿ ವ್ಯವಹರಿಸುವ ಎಲ್ಲ ನೂತನ ವಿತರಕರಿಗೆ ಆಧಾರ್ ಸಂಖ್ಯೆ ದೃಢೀಕರಣ ಕಡ್ಡಾಯಗೊಳಿಸಲಾಗಿದೆ. ಗ್ರಾಹಕರ ವ್ಯವಹಾರದ ಭೌತಿಕ ಪರಿಶೀಲನೆ ನಡೆದ ಪಕ್ಷದಲ್ಲಿ ಇದರ ವಿನಾಯಿತಿ ದೊರಕಲಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ಹಾಗೂ ಜಿಎಸ್ಟಿ ಮಂಡಳಿ ಮುಖ್ಯಸ್ಥ ಸುಶೀಲ್ಕುಮಾರ್ ಮೋದಿ ತಿಳಿಸಿದರು.
ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಶನಿವಾರ ನಗರದ ಖಾಸಗಿ ಹೋಟೇಲ್ನಲ್ಲಿ ಜಿಎಸ್ಟಿಯ ಬೆಳವಣಿಗೆಗಳ ಕುರಿತು ಸಭೆಯ ನಂತರ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ್ದು, ಈಗಾಗಲೇ ಜಿಎಸ್ಟಿಯಡಿ ನೋಂದಾಯಿತ ಗ್ರಾಹಕರಿಗೆ ಮುಂದಿನ ಹಂತದಲ್ಲಿ ಆಧಾರ್ ಕಡ್ಡಾಯಗೊಳಿಸಲಾಗುವುದು. ಗ್ರಾಹಕರು ಆನ್ಲೈನ್ ಮೂಲಕ ಜಿಎಸ್ಟಿ ಹಣದ ಮರುಪಾವತಿ ಮಾಡುವುದಕ್ಕೆ ಇದೇ ಸೆಪ್ಟೆಂಬರ್ 24 ಕ್ಕೆ ಗಡುವು ನೀಡಲಾಗಿದೆ. ಇದೀಗ ಕೇಂದ್ರ ಅಥವಾ ರಾಜ್ಯ ಯಾವುದಾದರೊಂದಕ್ಕೆ ಮರುಪಾವತಿಯನ್ನು ಮಾಡಬಹುದು. ಸದ್ಯ ₹ 93,416 ಕೋಟಿ ಮರುಪಾವತಿಯಾಗಬೇಕಿದ್ದು, ಅದರಲ್ಲಿ ಶೇ 74 ರಷ್ಟು ಮಾತ್ರ ಪಾವತಿಯಾಗಿದೆ. ಬಾಕಿ ಹಣವನ್ನು ಸಹ ಗ್ರಾಹಕರು ಶೀಘ್ರವೇ ಪಾವತಿಸಬೇಕೆಂದು ವಿನಂತಿಸಿದರು.
ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತೆರಿಗೆ ಪಾವತಿಗಾರರಿಗೆ ಹೊಸ ಆದಾಯ ನೀತಿಯನ್ನು ಜನವರಿ 2020ಕ್ಕೆ ಜಾರಿಗೊಳಿಸಲಾಗುವುದು. ಗ್ರಾಹಕರು ವಾರ್ಷಿಕ ಆದಾಯ ತೆರಿಗೆ ಪಾವತಿಯನ್ನು ಇದೇ ನವೆಂಬರ್ 30 ರೊಳಗೆ ಸಲ್ಲಿಸಬಹುದು. ಒಟ್ಟು 64,17,000 ಗ್ರಾಹಕರು ವಾರ್ಷಿಕ ತೆರಿಗೆಯಡಿ ಇದ್ದು, ಅದರಲ್ಲಿ ಕೇವಲ 21,35,000 ಗ್ರಾಹಕರು ಅಂದರೆ ಶೇ 33 ರಷ್ಟು ಮಾತ್ರ ವಾರ್ಷಿಕ ಆದಾಯವನ್ನು ಸಲ್ಲಿಕೆ ಮಾಡಿದ್ದಾರೆ. ಮುಂದುವರೆದ ದಿನಗಳಲ್ಲಿ ಇದನ್ನು ಇನ್ನಷ್ಟು ಸರಳೀಕರಣಗೊಳಿಸಲಾಗುವುದು ಎಂದರು.
ಈ ವರ್ಷದ ಜೂನ್, ಜುಲೈನಲ್ಲಿ ಯಾವ ಗ್ರಾಹಕರು ಆದಾಯವನ್ನು ನೋಂದಾಯಿಸಿರುವುದಿಲ್ಲವೋ ಅಂತವರ ಇ-ವೇ ಬಿಲ್ನ್ನು ರದ್ದುಗೊಳಿಸಲಾಗುವುದು. ಕರ್ನಾಟಕದಲ್ಲಿ 1,75,294 ಇ-ವೇ ಬಿಲ್ ಬಳಕೆದಾರರಲ್ಲಿ 35,033 ಗ್ರಾಹಕರು ಅನಧಿಕೃತವಾಗಿ ಬಿಲ್ ಬಳಸುತ್ತಿದ್ದು, ಅವುಗಳನ್ನು ಶೀಘ್ರದಲ್ಲಿ ರದ್ದುಗೊಳಿಸಲಾಗುವುದು. ಈ ಪ್ರಕ್ರಿಯೆಯನ್ನು ರಾಜ್ಯಾದ್ಯಂತ ನಡೆಸಲಾಗುವುದು. 15ನೇ ಹಣಕಾಸು ಆಯೋಗದ ಸದಸ್ಯರು ಸಹ ಇನ್ನು ಮುಂದೆ ಜಿಎಸ್ಟಿ ಮಂಡಳಿಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಭೆಯಲ್ಲಿ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಒಡಿಶಾ ರಾಜ್ಯದ ಹಣಕಾಸು ಹಾಗೂ ಅಬಕಾರಿ ಸಚಿವ ನಿರಂಜನ್ ಪೂಜಾರಿ ಉಪಸ್ಥಿತರಿದ್ದರು.