ಬೆಂಗಳೂರು :ಭಾರತದಲ್ಲಿ ಮಹಿಳೆಯರು ಒಂಟಿಯಾಗಿರಲು ಬಯಸುತ್ತಾರೆ. ಒಂದು ವೇಳೆ ಮದುವೆಯಾದರೂ ಅವರು ಮಗುವಿಗೆ ಜನ್ಮ ನೀಡಲು ನಿರಕಾರಿಸುತ್ತಿದ್ದಾರೆ. ಇದು ಒಳ್ಳೆ ಬೆಳವಣಿಗೆ ಅಲ್ಲ. ಇಂತಹ ಒತ್ತಡಗಳನ್ನು ಹೊರ ಹಾಕಬೇಕಿದ್ದು, ಅರ್ಧ ಗಂಟೆಗಳ ಉದ್ಯಾನವನದ ನಡಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ ಎಂದು ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಿತು. ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇವರಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಸಾಥ್ ನೀಡಿದರು.
ಮಾನಸಿಕ ಆರೋಗ್ಯ ಜಾಗೃತಿಯನ್ನು ಉತ್ತೇಜಿಸಲು ಮತ್ತು ಮಾನಸಿಕ ಆರೋಗ್ಯದ ಅಗತ್ಯಗಳನ್ನು ಪೂರೈಸುವ ಪ್ರಾಮುಖ್ಯತೆ ಎತ್ತಿ ತೋರಿಸಲು ನಿಮ್ಹಾನ್ಸ್ ಪ್ರತಿವರ್ಷ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತದೆ. ಈ ವರ್ಷ ಧನಾತ್ಮಕವಾದ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಶಿಕ್ಷಣ, ಪ್ರೋತ್ಸಾಹ ಮತ್ತು ಬೆಂಬಲ ನೀಡಲು ಸರಣಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿದೆ.
ಕಾರ್ಯಕ್ರಮ ಉದ್ಘಾಟಿಸಿ ಸಚಿವ ಸುಧಾಕರ್ ಮಾತನಾಡಿ, ಮನುಷ್ಯ ದಿನನಿತ್ಯದ ಒತ್ತಡದಿಂದ ಹೊರ ಬರುವುದು ಒಂದು ಕಲೆ. ಇದಕ್ಕೆ ಯೋಗ, ಧ್ಯಾನ, ಪ್ರಾಣಾಯಾಮ ಪ್ರಮುಖ ಅಸ್ತ್ರವಾಗಿವೆ. ಆದರೆ, ಬಹುತೇಕರು ಪಾಶ್ಚಿಮಾತ್ಯರ ದಾರಿ ಹಿಡಿದಿದ್ದಾರೆ ಎಂದರು.
ಕೋವಿಡ್ ಸಮಯದಲ್ಲಿ ಅನೇಕ ರೋಗಿಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಾವು ಎಲ್ಲಾ ರೋಗಿಗಳಿಗೂ ಕೌನ್ಸಿಲಿಂಗ್ ಮಾಡ್ತಿದ್ದು, ಸುಮಾರು 24 ಲಕ್ಷ ರೋಗಿಗಳಿಗೆ ಕೌನ್ಸಿಲಿಂಗ್ ಮಾಡಿದ್ದೇವೆ. ನಮ್ಮಲ್ಲಿ 0.3 ರಷ್ಟು ಮಾತ್ರ ಸೈಕಾಲಜಿಕಲ್ ಎಕ್ಸ್‌ಪರ್ಟ್ಸ್ ಇದ್ದಾರೆ. ಇದನ್ನು ಹೆಚ್ಚಳ ಮಾಡಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿಸುವ ಭರವಸೆ ನೀಡಿದರು.
ತಂಬಾಕು ತ್ಯಜಿಸಿ, ಹೀರೋ ಆಗಿ :ತಂಬಾಕು ತ್ಯಜಿಸಿ ಹೀರೋ ಆಗಿ ಎಂಬ ಶೀರ್ಷಿಕೆಯಡಿ ನಿಮ್ಹಾನ್ಸ್ ನ್ಯಾಷನಲ್ ಟೊಬ್ಯಾಕೋ ಕ್ವಿಟ್‌ಲೈನ್ ಸರ್ವಿಸಸ್ ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆ (ಭಾರತೀಯ ಶಾಖೆ) ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಡಬ್ಲ್ಯುಹೆಚ್‌ಒದ ವಿಶ್ವ ತಂಬಾಕು ರಹಿತ ದಿನಾಚರಣೆ-2021ರ ಜಾಗತಿಕ ಅಭಿಯಾನ #committoquitವನ್ನು ವರ್ಷವಿಡೀ ಆಯೋಜಿಸುತ್ತಿದೆ. ತಂಬಾಕು ಬಳಕೆದಾರರಿಗೆ ಸ್ವಯಂ-ನಿರ್ಮಿತ ವಿಡಿಯೋದ ಮೂಲಕ ತಂಬಾಕು ತ್ಯಜಿಸುವ ಅಥವಾ ತ್ಯಜಿಸುವ ಪ್ರಯತ್ನದ ನಿರೂಪಣೆಯನ್ನು ಹಂಚಿಕೊಳ್ಳಲು ವೇದಿಕೆ ಒದಗಿಸುತ್ತಿದೆ.
ತಂಬಾಕು ಬಳಕೆದಾರರನ್ನು ದೊಡ್ಡ ಸಂಖ್ಯೆಯಲ್ಲಿ ತಲುಪಲು ಪ್ರತ್ಯೇಕ ವೆಬ್‌ಸೈಟ್https://www.cartnitecruittobacco.inನಲ್ಲಿ ಸಣ್ಣ ವಿಡಿಯೋ ತುಣುಕುಗಳ (90 ಸೆಕೆಂಡ್‌ಗಳ) ರೂಪದಲ್ಲಿ ತಮ್ಮ ಕಥೆಗಳನ್ನು ಹಂಚಿಕೊಳ್ಳಲು ಹುರಿದುಂಬಿಸುತ್ತಿದೆ. ತಜ್ಞರ ಆಯ್ಕೆ ಸಮಿತಿಯ ಮೂಲಕ ಐದು ಉತ್ತಮ ವಿಡಿಯೋಗಳನ್ನು ಆಯ್ಕೆ ಮಾಡಿ ಅತ್ಯಾಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಇನ್ನೂ 3 ದಿನ ಭಾರಿ ಮಳೆ: ರಾಮನಗರ ಹೊರತುಪಡಿಸಿ ರಾಜ್ಯದೆಲ್ಲೆಡೆ ಯೆಲ್ಲೋ ಅಲರ್ಟ್