ಬೆಂಗಳೂರು: 2023ರ ವಿಶ್ವಕಪ್ನ ಮಹತ್ವ ಪಂದ್ಯಕ್ಕೆ ನಾಳೆ (ಶನಿವಾರ) ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವೆ ಸೆಮಿಫೈನಲ್ ಭರ್ಜರಿ ಪೈಪೋಟಿ ಏರ್ಪಡಲಿದೆ. ಮಹತ್ವದ ಪಂದ್ಯ ವಾರಾಂತ್ಯದಲ್ಲಿ ನಡೆಯುತ್ತಿರುವುದರಿಂದ ಪ್ರೇಕ್ಷಕರು ಅಧಿಕ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಈ ವೇಳೆ ಸಂಚಾರಕ್ಕೆ ಸಮಸ್ಯೆ ಆಗದಂತೆ ಎಚ್ಚರ ವಹಿಸುವ ಹಿನ್ನೆಲೆಯಲ್ಲಿ ವಾಹನ ನಿಲುಗಡೆಗೆ ಬದಲಿ ವ್ಯವಸ್ಥೆ ಮಾಡಲಾಗಿದೆ.
ನಾಳೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 11ರವರೆಗೆ ಕೆಲ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಸೆಂಟ್ ಮಾರ್ಕ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರ ಬಾ ರಸ್ತೆ, ಬಿ.ಆರ್. ಅಂಬೇಡ್ಕರ್ ರಸ್ತೆ, ಲ್ಯಾವೆಲ್ಲಿ ರಸ್ತೆ, ವಿಠಲ್ ಮಲ್ಯ ರಸ್ತೆ, ನೃಪತುಂಗ ರಸ್ತೆಗಳಲ್ಲಿ ವಾಹನ ನಿಷೇಧಿಸಲಾಗಿದೆ. ಸಾರ್ವಜನಿಕ ವಾಹನ ನಿಲುಗಡೆ ಸ್ಥಳಗಳಲ್ಲಿ ಪೇ ಪಾರ್ಕ್ ವ್ಯವಸ್ಥೆ ಮಾಡಲಾಗಿದೆ.
ಕಿಂಗ್ ರಸ್ತೆ, ಯುಬಿ ಸಿಟಿ ಪಾರ್ಕಿಂಗ್ ಸ್ಥಳ, ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೊದಲನೇ ಮಹಡಿಗಳಲ್ಲಿ ವಾಹನ ನಿಲ್ದಾಣಕ್ಕೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಮ್ಯಾಚ್ ನಡೆಯುವಾಗ ಕ್ರೀಡಾಂಗಣದ ಸುತ್ತಮುತ್ತಲು ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.