ಬೆಂಗಳೂರು: ಶೀಘ್ರದಲ್ಲಿ ಶಿಕ್ಷಕರ ವರ್ಗಾವಣೆಗೆ ಹೊಸ ಕಾನೂನು ತರಲಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.
ವಿಕಾಸಸೌಧದಲ್ಲಿ ಪರಿಷತ್ ಸದಸ್ಯರ ಜೊತೆ ಸಭೆ ನಡೆಸಿ, ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾದಿಂದಾಗಿ ವರ್ಗಾವಣೆ ಸಂಬಂಧ ಹೊಸ ಕಾಯ್ದೆ ತರಲು ಆಗಲಿಲ್ಲ. ಹೀಗಾಗಿ ಈಗಿರುವ ಕಾಯ್ದೆಯನ್ನು ಹಿಂದಕ್ಕೆ ಪಡೆದು, ಹೊಸ ಕಾನೂನು ತರಲು ನಿರ್ಧರಿಸಿದ್ದೇವೆ ಎಂದರು.
ನಮ್ಮ ಶಿಕ್ಷಣ ಇಲಾಖೆಯ ತಜ್ಞರ ಅಭಿಪ್ರಾಯ ಪಡೆದಿದ್ದೇವೆ. ಸದ್ಯದಲ್ಲೇ ಕಾನೂನಿನ ಕರಡು ಹೊರಡಿಸಲಿದ್ದೇವೆ. ಈ ಶೈಕ್ಷಣಿಕ ವರ್ಷದಲ್ಲೇ ವರ್ಗಾವಣೆ ಕಾನೂನು ಜಾರಿಗೆ ತರಲಿದ್ದೇವೆ. ಆ ಮೂಲಕ ವರ್ಗಾವಣೆ ನೀತಿ ಸರಳೀಕರಣಗೊಳಿಸಲಿದ್ದೇವೆ. ಈ ಕಾನೂನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಿತ ಕಾಪಾಡಲಿದೆ ಎಂದು ವಿವರಿಸಿದರು.
ಪದವಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಿಷತ್ ಸದಸ್ಯರ ಜೊತೆ ಇಂದು ಸಭೆ ನಡೆಸಿದ್ದೇವೆ. ಪರೀಕ್ಷೆ ಹೇಗೆ ನಡೆಸಬೇಕು, ಮಲ್ಟಿಪಲ್ ಪ್ರಶ್ನೆಗಳನ್ನು ನೀಡುವುದು, ಪರೀಕ್ಷಾ ಮೌಲ್ಯಮಾಪನ, ಉಪನ್ಯಾಸಕರ ರಜೆ, ಕೆಲಸ ಹೇಗೆ ನಿರ್ವಹಿಸಬೇಕು, ಆನ್ಲೈನ್ ಕ್ಲಾಸ್ ಮಾಡುತ್ತಿರುವುದು ಈ ಎಲ್ಲ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
1,270 ಶಿಕ್ಷಕರ ನೇಮಕಾತಿ, 310 ಪ್ರಾಂಶುಪಾಲರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಭರ್ತಿ ಮಾಡುವ ಬಗ್ಗೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.
ಹೊಸ ಶಿಕ್ಷಣ ನೀತಿಯನ್ನ ಜಾರಿಗೆ ತರಲು ನಿರ್ಧರಿಸಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಬರಲಿದೆ. ಇದರ ಬಗ್ಗೆಯೂ ಟಾಸ್ಕ್ಫೋರ್ಸ್ ರಚನೆ ಮಾಡಿದ್ದೇವೆ. ಡಿಪ್ಲೊಮೋಗೆ ಅಡ್ಮಿಷನ್ ಕಡಿಮೆಯಾಗುತ್ತಿದೆ. ಹೀಗಾಗಿ ಹೊಸ ರೂಪ ಕೊಡಲು ಚಿಂತನೆ ನಡೆದಿದೆ. ಶಿಕ್ಷಣ ಮಟ್ಟವನ್ನ ಸರಿಪಡಿಸುವ ನಿಟ್ಟಿನಲ್ಲಿ ಹಲವು ಕ್ರಮಕೈಗೊಳ್ಳಲಿದ್ದೇವೆ. ಸ್ಕಿಲ್ ಟ್ರೈನಿಂಗ್ ಮಾದರಿಯಲ್ಲಿ ಸಿಲೆಬಸ್ ರಿವೈವ್ ಮಾಡುತ್ತೇವೆ. ಜೊತೆಗೆ ಹೊಸ ಕಾರ್ಯಕ್ರಮಗಳನ್ನ ತರಲು ಉದ್ದೇಶಿಸಿದ್ದೇವೆ ಎಂದರು.