ಕರ್ನಾಟಕ

karnataka

ETV Bharat / state

ಆಮ್ಲಜನಕ ಸ್ವಾವಲಂಬನೆಗಾಗಿ ನೂತನ ಕೈಗಾರಿಕಾ ಉತ್ತೇಜನ ನೀತಿ; ಶೆಟ್ಟರ್ - ಕರ್ನಾಟಕ ಕೈಗಾರಿಕಾ ನೀತಿ

ರಾಜ್ಯದಲ್ಲಿ ಆಮ್ಲಜನಕದ ಉತ್ಪಾದನೆಯನ್ನ ಹೆಚ್ಚಿಸುವ ಉದ್ದೇಶದಿಂದ ನೂತನ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲು ಮುಂದಾಗುವ ಕೈಗಾರಿಕೋದ್ಯಮಿಗಳಿಗೆ ಆಕರ್ಷಕ ಉತ್ತೇಜನ ನೀಡಲು ಯೋಜನೆ ರೂಪಿಸುವಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

new industrial policy to make karnataka oxygen self reliant
ಆಮ್ಲಜನಕ ಸ್ವಾವಲಂಬನೆಗಾಗಿ ನೂತನ ಕೈಗಾರಿಕಾ ಉತ್ತೇಜನ ನೀತಿ; ಶೆಟ್ಟರ್

By

Published : May 26, 2021, 7:34 PM IST

ಬೆಂಗಳೂರು: ರಾಜ್ಯವನ್ನು ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬಿಗೊಳಿಸುವ ನಿಟ್ಟಿನಲ್ಲಿ, ನೂತನ ಆಮ್ಲಜನಕ ಘಟಕಗಳ ಸ್ಥಾಪನೆ ಪ್ರೋತ್ಸಾಹಿಸಲು ಕೈಗಾರಿಕಾ ಇಲಾಖೆಯಿಂದ ಉತ್ತೇಜನ ಯೋಜನೆಯೊಂದನ್ನು ತರಲು ಚಿಂತನೆ ನಡೆದಿದೆ ಎಂದು ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ಮತ್ತು ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು, ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಶೆಟ್ಟರ್‌ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ಕೇಂದ್ರ ಸರಕಾರದೊಂದಿಗೆ ನಿರಂತರ ಮಾತುಕತೆ ಸಫಲವಾಗಿದ್ದು, ರಾಜ್ಯಕ್ಕೆ 1200 ಮೆಟ್ರಿಕ್‌ ಟನ್‌ ದ್ರವೀಕೃತ ಆಮ್ಲಜನಕ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ವಹಿಸಿಕೊಂಡ ನಂತರ ರಾಜ್ಯಕ್ಕೆ ಹೆಚ್ಚಿನ ಆಮ್ಲಜನಕದ ಅವಶ್ಯಕತೆ ಇದೆ ಎನ್ನುವುದರ ಬಗ್ಗೆ ಕೇಂದ್ರ ಸರಕಾರ ಹಾಗೂ ಕೇಂದ್ರ ಸಚಿವರಾದ ಪಿಯೂಷ್​​ ಗೋಯೆಲ್‌, ಪ್ರಹ್ಲಾದ್‌ ಜೋಶಿ ಮತ್ತು ಸದಾನಂದಗೌಡ ಅವರೊಂದಿಗೆ ನಿರಂತರ ಸಂಪರ್ಕ ಮತ್ತು ಮಾತುಕತೆಯನ್ನು ನಡೆಸಿದ್ದೆವು ಎಂದು ಹೇಳಿದರು.

ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲಿಯೇ ಬಳಸಿಕೊಳ್ಳುವಂತೆ ಅನುವು ಮಾಡಿ ಕೊಡಲಾಗಿದೆ. 1200 ಎಂಟಿ ದ್ರವೀಕೃತ ಆಮ್ಲಜನಕ ನಿಗದಿಗೊಳಿಸಿರುವಲ್ಲಿ ರಾಜ್ಯದಿಂದ 830 ಎಂಟಿ, ರಾಜ್ಯದಲ್ಲಿನ ಎಂಎಸ್‌ಎಂಇ ಪಿಎಸ್‌ಎ 60 ಎಂಟಿ, 240 ಎಂಟಿ ಯನ್ನು ಮಹರಾಷ್ಟ್ರ ಹಾಗೂ 70 ಎಂಟಿ ಆಮ್ಲಜನಕವನ್ನು ಒಡಿಶಾದಿಂದ ಒದಗಿಸಲು ಆದೇಶ ಹೊರಡಿಸಲಾಗಿದೆ. ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದಲ್ಲಿಯೇ ಬಳಸಿಕೊಳ್ಳಲು ಅನುಮತಿ ನೀಡಿರುವುದರಿಂದ ಸಾಗಾಣಿಕಾ ಸಮಯ ಉಳಿಯಲಿದೆ ಎಂದರು.

ಕೈಗಾರಿಕಾ ಇಲಾಖೆಯಿಂದ ಉತ್ತೇಜನ ಯೋಜನೆ: ರಾಜ್ಯದಲ್ಲಿ ಆಮ್ಲಜನಕದ ಉತ್ಪಾದನೆಯನ್ನ ಹೆಚ್ಚಿಸುವ ಉದ್ದೇಶದಿಂದ ನೂತನ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲು ಮುಂದಾಗುವ ಕೈಗಾರಿಕೋದ್ಯಮಿಗಳಿಗೆ ಆಕರ್ಷಕ ಉತ್ತೇಜನ ನೀಡಲು ಯೋಜನೆ ರೂಪಿಸುವಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಗಳಲ್ಲಿ ಆಮ್ಲಜನಕ ಬಫರ್‌ ಸ್ಟಾಕ್‌ ಸ್ಟೋರೇಜ್​ಗೆ ಯೋಜನೆ ರೂಪಿಸಲು ಸೂಚನೆ: ಜಿಲ್ಲೆಗಳಲ್ಲಿ ಆಮ್ಲಜನಕ ಬಫರ್‌ ಸ್ಟಾಕ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ 20 ಎಂಟಿಗಳಷ್ಟು ಸ್ಟೋರೇಜ್‌ ಸಾಮರ್ಥ್ಯ ಹೆಚ್ಚಿಸಿದರೆ ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಆಯಾ ಜಿಲ್ಲೆಗಳಲ್ಲಿ ಇರುವ ಸಕ್ರೀಯ ಪ್ರಕರಣಗಳ ಆಧಾರದ ಮೇಲೆ ಆಮ್ಲಜನಕ ಹಂಚಿಕೆ ಮಾಡಲಾಗುತ್ತಿದೆ. ಪ್ರತಿ ದಿನ ಆಯಾ ಆಸ್ಪತ್ರೆಗಳಿಗೆ ನಿಗದಿಪಡಿಸಲಾಗಿರುವ ಪ್ರಮಾಣದಲ್ಲಿ ಆಮ್ಲಜನಕ ರವಾನೆ ಆಗುತ್ತಿರುವ ಬಗ್ಗೆ ಮಾಹಿತಿ ತಗೆದುಕೊಳ್ಳಲಾಗುತ್ತಿದೆ. ಕಳೆದ 5 ದಿನಗಳಲ್ಲಿ ಕ್ರಮವಾಗಿ 889.93, 855.21, 1062.71, 899.22 ಮತ್ತು 728.36 ಎಂಟಿ ಆಮ್ಲಜನಕ ರಾಜ್ಯಕ್ಕೆ ದೊರಕಿದೆ. ಒಟ್ಟಾರೆಯಾಗಿ ಸರಾಸರಿ 887.08 ಎಂಟಿಗಳಷ್ಟು ಆಮ್ಲಜನಕ ದೊರೆತಿದೆ ಎಂದು ಸಚಿವರು ವಿವರಿಸಿದರು.

ಕೇಂದ್ರದ ಸಹಕಾರದಿಂದ 150 ಎಂಟಿಗಳಷ್ಟು ದ್ರವೀಕೃತ ಆಮ್ಲಜನಕ ಮಂಗಳೂರು ಬಂದರಿಗೆ ಬಂದು ತಲುಪಿದೆ. ಕೇಂದ್ರ ಸರಕಾರದ ಸಹಕಾರದಿಂದ ರಾಜ್ಯಕ್ಕೆ ರೈಲುಗಳಲ್ಲಿ ರವಾನೆಯಾಗುತ್ತಿರುವ ಆಮ್ಲಜನಕದಿಂದ ರಾಜ್ಯದ ಪರಿಸ್ಥಿತಿ ದಿನೇ ದಿನೆ ಸುಧಾರಿಸುತ್ತಿದೆ ಎಂದರು.

4 ಐಎಸ್‌ಓ ಟ್ಯಾಂಕರ್‌ಗಳ ರವಾನೆ: ಶನಿವಾರದಂದು ಒರಿಸ್ಸಾದ ಕಳಿಂಗ ನಗರದಿಂದ ಇನ್ನೂ 4 ಐಎಸ್‌ಓ ಟ್ಯಾಂಕರ್‌ ಬರುವ ನಿರೀಕ್ಷೆ ಇದೆ. ಇದರಿಂದ ನಮ್ಮ ರಾಜ್ಯದಲ್ಲಿ ಟ್ಯಾಂಕರ್‌ಗಳ ಸಂಖ್ಯೆ ಹೆಚ್ಚಾಗಲಿದೆ. ಯಾದಗಿರಿ ಮತ್ತು ಕೋಲಾರದಲ್ಲಿ 500 ಎಲ್‌ಪಿಎಂ ಆಕ್ಸಿಜನ್‌ ಜನರೇಟರ್‌ ಕಾರ್ಯಾರಂಭವಾಗಿದೆ. ಬೋಯಿಂಗ್‌ ಸಹಯೋಗದಲ್ಲಿ ಕಲಬುರ್ಗಿ ಇಎಸ್‌ಐ ಆಸ್ಪತ್ರೆಯಲ್ಲಿ 1000 ಎಲ್‌ಪಿಎಂ ಆಕ್ಸಿಜನ್‌ ಜನರೇಟರ್‌ ಪ್ಲಾಂಟ್​ ಮೇ 22 ರಿಂದ ಕಾರ್ಯಾರಂಭವಾಗಿದೆ ಎಂದು ಹೇಳಿದರು.

ಆಕ್ಸಿಜನ್‌ ಜನರೇಟರ್‌ ಯೂನಿಟ್‌ಗಳು: ಕೇಂದ್ರ ಸರ್ಕಾರದ ವತಿಯಿಂದ ರಾಜ್ಯಕ್ಕೆ 28, ಕರ್ನಾಟಕ ಸರಕಾರ 40, ಎನ್‌ಹೆಚ್‌ಎಐ – ಡಿಆರ್‌ಡಿಒ ಸಹಕಾರದಲ್ಲಿ 26 ಆಕ್ಸಿಜನ್‌ ಜನರೇಟರುಗಳನ್ನು ರಾಜ್ಯದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಆಮ್ಲಜನಕ ಉತ್ಪಾದನಾ ಘಟಕಗಳ ಪುನರುಜ್ಜೀವನ: ರಾಜ್ಯದಲ್ಲಿ ನಿಷ್ಕ್ರೀಯವಾಗಿರುವ ಆಮ್ಲಜನಕ ಉತ್ಪಾದನಾ ಘಟಕಗಳ ಪುನರುಜ್ಜೀವನ ಕಾರ್ಯ ನಡೆಸಲಾಗುತ್ತಿದೆ. ಯೆರಮರಸ್‌ ನಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕವನ್ನು ಖಾಸಗಿಯವರಿಗೆ ವಹಿಸಿ ಕಾರ್ಯಾರಂಭ ಮಾಡಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನಾಯಕತ್ವದ ಬಗ್ಗೆ ಚರ್ಚೆ ನಡೆದಿಲ್ಲ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಮಾದ್ಯಮಗಳಲ್ಲಿ ನೋಡಿದ್ದೇನೆ ಅಷ್ಟೇ. ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಅದು ನನ್ನ ಗಮನಕ್ಕೆ ಬಂದಿಲ್ಲ ಎಂದರು.

ABOUT THE AUTHOR

...view details