ಬೆಂಗಳೂರು:ನೀಟ್ ಪರೀಕ್ಷೆ ಬರೆಯುವ ಪರೀಕ್ಷಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ರೋಡ್ ಶೋ ಆಯೋಜಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದು ಅದರಂತೆ ಪರೀಕ್ಷಾ ದಿನ ಚಿಕ್ಕ ರೋಡ್ ಶೋ ಮಾತ್ರ ನಡೆಸಲಾಗುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಪರೀಕ್ಷಾ ಕೇಂದ್ರಕ್ಕೆ ಅಡೆತಡೆ ಇಲ್ಲದೆ ರೋಡ್ ಶೋ ಮಾರ್ಗದಲ್ಲಿ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ರೋಡ್ ಶೋ 6, 7 ಕ್ಕೆ ಇದೆ. ಆದರೆ ಭಾನುವಾರ ಮಧ್ಯಾಹ್ನ ಮೇಲೆ ನೀಟ್ ಎಕ್ಸಾಮ್ ಇದೆ. ಅಂದು ನಡೆಯಲಿರುವ 26 ಕಿಲೋ ಮೀಟರ್ ರೋಡ್ ಶೋ ಸಮಸ್ಯೆ ಆಗುವ ಬಗ್ಗೆ ಪ್ರಧಾನಿಯವರ ಗಮನಕ್ಕೆ ತಂದೆವು.
ಪ್ರಧಾನಿಯವರು ಮಕ್ಕಳ ಪರೀಕ್ಷೆ ಬಗ್ಗೆ ಕಾಳಜಿಯುಳ್ಳವರು, ಪರಿಕ್ಷಾ ಪೇ ಚರ್ಚಾ ನಡೆಸಿದ್ದಾರೆ. ಮೋದಿ ರೋಡ್ ಶೋನಿಂದ ಒಬ್ಬ ವಿದ್ಯಾರ್ಥಿಗೆ ತೊಂದರೆ ಆಗಬಾರದು ಎಂಬ ಬದಲಾವಣೆ ಮಾಡಿ ಅಂತ ಹೇಳಿದ್ರು, ಮೋದಿಯವರಿಗೆ ವಿದ್ಯಾರ್ಥಿಗಳ ಮೇಲೆ ವಿಶೇಷ ಕಾಳಜಿ ಇದೆ. ಮಕ್ಕಳ ಭವಿಷ್ಯ ಬರೆಯುವ ನೀಟ್ ಪರೀಕ್ಷೆ ದಿನ ಪ್ರಧಾನಿ ಅಪೇಕ್ಷೆಯಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮಗಳು ಅದಲು ಬದಲಾಯಿಸಿದ್ದೇವೆ.
ಹೊಸ ಯೋಜನೆಯಂತೆ ದೊಡ್ಡ ರೋಡ್ ಶೋ ಶನಿವಾರ ಇರುತ್ತೆ 26.5 ಕಿ.ಮೀ ರೋಡ್ ಶೋ ಇರುತ್ತೆ. ಭಾನುವಾರ ಚಿಕ್ಕ ರೋಡ್ ಶೋ ಇರುತ್ತದೆ. ಇದರಿಂದ ಯಾವುದೇ ಮಕ್ಕಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಭಾನುವಾರ ರೋಡ್ ಶೋ ರೂಟ್ನಲ್ಲಿ ಕಡಿಮೆ ಪರೀಕ್ಷಾ ಕೇಂದ್ರಗಳಿವೆ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಪೊಲೀಸರು ಪರೀಕ್ಷಾ ಕೇಂದ್ರಕ್ಕೆ ಹೋಗಲು ಅವಕಾಶ ಕೊಡ್ತಾರೆ. ಪೊಲೀಸರಿಗೆ ಸಹಕರಿಸುವಂತೆ ಸೂಚನೆ ಕೊಡಲಾಗಿದೆ ಎಂದರು.
ರೋಡ್ ಶೋ ವ್ಯಾಪ್ತಿ: ಮೇ 6ರಂದು 26 ಕಿಲೋ ಮೀಟರ್ ಆರ್ಬಿಐ ಗ್ರೌಂಡ್ ಸೋಮೇಶ್ವರ ಭವನದಿಂದ ಸ್ಯಾಂಕಿ ಕೆರೆವರೆಗೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಆರಂಭ ಆಗಿ, ಮಧ್ಯಾಹ್ನ 1:30 ವರೆಗೂ ನಡೆಯಲಿದೆ. 7 ರಂದು ಭಾನುವಾರ 8 ಕಿಲೋ ಮೀಟರ್ ವರೆಗೆ ರೋಡ್ ಶೋ ಮಾಡುತ್ತೇವೆ. ಕೆಂಪೇಗೌಡ ಸ್ಟ್ಯಾಚು - ಟ್ರಿನಿಟಿ ರಸ್ತೆ ವರೆಗೂ ಒಟ್ಟು 8 ಕಿಲೋ ಮೀಟರ್ ರೋಡ್ ಶೋ ನಡೆಯಲಿದೆ. ಬೆಳಗ್ಗೆ 10ಗಂಟೆಯಿಂದ 11:30 ವರೆಗೂ ಭಾನುವಾರ ಚಿಕ್ಕ ರೋಡ್ ಶೋ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಮೋದಿ ರೋಡ್ ಶೋ ವೇಳೆ ಕಾಂಗ್ರೆಸ್ ಪಕ್ಷದವರು ಅಂಬ್ಯುಲೆನ್ಸ್‌ಗಳ ದುರುಪಯೋಗದ ಷಡ್ಯಂತ್ರ ಮಾಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ರೋಡ್ ಶೋ ವೇಳೆ ಆಂಬುಲೆನ್ಸ್‌ಗಳನ್ನು ತರೋದಕ್ಕೆ ಕಾಂಗ್ರೆಸ್ ಸಂಚು ಮಾಡಿದೆ. ಯಾವುದೇ ಆಂಬುಲೆನ್ಸ್‌ಗೂ ಸಂಚಾರಕ್ಕೆ ಭಂಗ ಮಾಡದೇ ಹೋಗಲು ಅವಕಾಶ ಇದೆ. ಆದರೆ ಆಂಬುಲೆನ್ಸ್‌ಗಳಲ್ಲಿ ರೋಗಿ ಇದ್ದಾರಾ, ಇಲ್ವಾ ಅಂತ ತಪಾಸಣೆ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಕಾಂಗ್ರೆಸ್ ಮೋದಿ ರೋಡ್ ಶೋ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಅಪಾದಿಸಿದರು.
ಇದನ್ನೂಓದಿ:ಗುಂಡ್ಲುಪೇಟೆಯಲ್ಲಿ ಸುದೀಪ್ ರೋಡ್ ಶೋ: ಮತಬೇಟೆಯಲ್ಲಿ 'ವೀರ ಮದಕರಿ' ಸಿನಿಮಾ ಡೈಲಾಗ್