ಕರ್ನಾಟಕ

karnataka

ETV Bharat / state

ವೈದ್ಯಕೀಯ ಸೀಟುಗಳ ಪ್ರವೇಶ ಅಕ್ರಮವೆಂದ ರಾಷ್ಟ್ರೀಯ ವೈದ್ಯಕೀಯ ಆಯೋಗ: ಹೈಕೋರ್ಟ್ ಮೊರೆ ಹೋದ ವಿದ್ಯಾರ್ಥಿಗಳು

ವೈದ್ಯಕೀಯ ಸೀಟುಗಳ ಪ್ರವೇಶ ಅಕ್ರಮವೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೇಳಿದ್ದು, ವಿದ್ಯಾರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

High Court
ಹೈಕೋರ್ಟ್

By ETV Bharat Karnataka Team

Published : Sep 13, 2023, 6:50 AM IST

ಬೆಂಗಳೂರು:2022-23ನೇ ಸಾಲಿನ ತಮ್ಮ ಪ್ರವೇಶವನ್ನು ಅಕ್ರಮ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ತಿಳಿಸಿರುವ ಹಿನ್ನೆಲೆಯಲ್ಲಿ ತಮಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಕೋರಿ ಮಂಗಳೂರಿನ ಜಿ.ಆರ್.ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಡಿ.ಎಸ್.ಧಾತ್ರಿ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾ.ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ, ಕೇಂದ್ರ ಮತ್ತು ರಾಜ್ಯ ಸರ್ಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕಾಲೇಜಿಗೆ ನೊಟೀಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 20ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲರ ವಾದ:ಅರ್ಜಿದಾರರು ತಮ್ಮ ವಿದ್ಯಾಭ್ಯಾಸ ಮುಂದುವರಿಕೆಗೆ ಅನುಕೂಲವಾಗುವಂತೆ ಯಾವುದಾದರೂ ಸರ್ಕಾರಿ ಕಾಲೇಜಿಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕೆಂದು ಕೋರಿದ್ದಾರೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಜಿ.ಆರ್.ಮೆಡಿಕಲ್ ಕಾಲೇಜಿನಲ್ಲಿ ಸೂಕ್ತ ಮೂಲಭೂತ ಸೌಕರ್ಯವಿಲ್ಲ ಮತ್ತು ಕಾಲೇಜು ವೈದ್ಯಕಿಯ ಶಿಕ್ಷಣ ನೀಡಲು ಕಾನೂನು ಪ್ರಕಾರ ಅರ್ಹತೆ ಹೊಂದಿಲ್ಲ ಎಂದು ಕಾಲೇಜಿನ ವಿರುದ್ಧ ಕ್ರಮ ಕೈಗೊಂಡಿದೆ. ಆದರೆ, ಈ ವಿಚಾರದಲ್ಲಿ ಅರ್ಜಿದಾರರಾದ ವಿದ್ಯಾರ್ಥಿಗಳ ತಪ್ಪೇನೂ ಇಲ್ಲ, ಅವರೆಲ್ಲಾ ಮುಗ್ಧರು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ಬಹುತೇಕ ವಿದ್ಯಾರ್ಥಿಗಳು ಎರಡನೇ ಸುತ್ತಿನಲ್ಲಿ ಕಾಲೇಜಿನಲ್ಲಿ ಸೀಟು ಪಡೆದು ಪ್ರವೇಶ ಪಡೆದಿದ್ದಾರೆ. ಆ ಸೀಟುಗಳನ್ನು ಪುನಃ ವಾಪಸ್ ನೀಡಲಾಗದು. ಹಾಗಾಗಿ ಸರ್ಕಾರ ಮತ್ತು ಕೆಇಎ, ಕಾಲೇಜಿಗೆ ಪ್ರವೇಶ ನೀಡಿರುವ ಹಿನ್ನೆಲೆಯಲ್ಲಿ ಇದೀಗ ಅವುಗಳೆಲ್ಲದರ ಹೊಣೆಯನ್ನು ವಿದ್ಯಾರ್ಥಿಗಳು ಹೊರಬೇಕು. ಅವರಿಗೆ ಯಾವುದಾದರೂ ಸರ್ಕಾರಿ ಕಾಲೇಜಿನಲ್ಲಿ ಸೀಟುಗಳನ್ನು ಒದಗಿಸಿಕೊಡುವಂತೆ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದರು.

ವರ್ಷದ ಹಿಂದಿನ ಪ್ರಕರಣ- ಖಾಸಗಿ ದಂತ ಕಾಲೇಜುಗಳಿಗೆ ದಂಡ:2021-22ರ ಶೈಕ್ಷಣಿಕ ವರ್ಷದಲ್ಲಿ ದಂತ ವೈದ್ಯಕೀಯ ಕೋರ್ಸ್‌ನಲ್ಲಿ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಕೆಲವು ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಲು ಕಾರಣರಾಗಿತ್ತಿರುವ ಹಿನ್ನೆಲೆಯಲ್ಲಿ ಎರಡು ಖಾಸಗಿ ದಂತ ಕಾಲೇಜುಗಳಿಗೆ ಹೈಕೋರ್ಟ್​ 2022ರ ಅಕ್ಟೋಬರ್ 8ರಂದು ತಲಾ 1 ಲಕ್ಷ ರೂ. ದಂಡ ವಿಧಿಸಿತ್ತು. ದಂಡದ ಮೊತ್ತವನ್ನು ವಕೀಲರ ಸಂಘಕ್ಕೆ ಪಾವತಿ ಮಾಡಬೇಕು ಎಂದು ಸೂಚನೆ ನೀಡಿ ಅರ್ಜಿ ವಜಾಗೊಳಿಸಿತ್ತು. ಬೆಂಗಳೂರಿನ ವೆಂಕಟೇಶ್ವರ ದಂತ ಕಾಲೇಜು ಮತ್ತು ಆಸ್ಪತ್ರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ದಂತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಆದೇಶಿಸಿತ್ತು.

ಇದನ್ನೂ ಓದಿ:ಮೈಸೂರು ವಿವಿ ಕುಲಪತಿ ಲೋಕನಾಥ್​ ನೇಮಕಾತಿ ರದ್ದುಪಡಿಸಿದ ಹೈಕೋರ್ಟ್

ABOUT THE AUTHOR

...view details