ಬೆಂಗಳೂರು:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್ನಲ್ಲಿ ಆಯೋಜಿಸಲಾಗಿರುವ ಏರೋ ಇಂಡಿಯಾ-2023ರಲ್ಲಿ ಪಾಲ್ಗೊಳ್ಳಲು ಭಾರತೀಯ ವಾಯುಸೇನಾ ವಿಮಾನದ ಮೂಲಕ ಬೆಂಗಳೂರಿನ ಎಚ್.ಎ.ಎಲ್.ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸ್ವಾಗತಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಸಚಿವ ಭೈರತಿ ಬಸವರಾಜ್, ಶಾಸಕರಾದ ಅರವಿಂದ ಲಿಂಬಾವಳಿ, ಎ.ಕೃಷ್ಣಪ್ಪ, ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ, ಡಿಜಿ ಮತ್ತು ಐಜಿಪಿ ಹಾಗೂ ಹಿರಿಯ ಅಧಿಕಾರಿಗಳು ಮತ್ತು ಹೆಚ್.ಎ.ಎಲ್ ನ ಹಿರಿಯ ಅಧಿಕಾರಿಗಳು ಹಾಗೂ ಇನ್ನಿತರರು ಇದ್ದರು.
ಏರೋ ಇಂಡಿಯಾ-2023 ಫೆ.13ರಿಂದ ಫೆ.17ರವರೆಗೆ ನಡೆಯಲಿದೆ. ಇಂದು ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ ನಾಳೆ ಬೆಳಗ್ಗೆ ಏರ್ ಶೋ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ತ್ರಿಪುರಕ್ಕೆ ತೆರಳಲಿದ್ದಾರೆ.
ಬೆಂಗಳೂರಿನಲ್ಲಿ ಸ್ವಂತ ಏರ್ ಕ್ರಾಪ್ಟ್ ತಯಾರಿಸುವ ಗುರಿ:ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಏರೋ ಇಂಡಿಯಾ 2023ರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರೊಂದಿಗೆ ಪಾಲ್ಗೊಂಡು ಮಾತನಾಡಿದ ಸಿಎಂ, ಬೆಂಗಳೂರು ವಾಣಿಜ್ಯ ಮತ್ತು ರಕ್ಷಣಾ ಉತ್ಪಾದನೆ ಕೇಂದ್ರವಾಗಿದೆ. ಬೆಂಗಳೂರಿನಲ್ಲಿ ಸ್ವಂತ ಏರ್ ಕ್ರಾಪ್ಟ್ ತಯಾರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಕಾರ್ಯಸಾಧನೆಗೆ ಜಾಗತಿಕವಾಗಿ ಸಾಕಷ್ಟು ಕ್ರಮ ವಹಿಸಿದ್ದು, ಈ ದೇಶದ ಭವಿಷ್ಯಕ್ಕೆ ನಾವು ಸೂಕ್ತ ಸ್ಥಳ ಮತ್ತು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ರಾಜ್ಯವು ಏರೊಸ್ಪೇಸ್ ನೀತಿ ಹಾಗೂ ರಕ್ಷಣಾ ಪಾರ್ಕ್ನ ಮೊದಲ ಹಂತ ಪೂರ್ಣಗೊಂಡಿದೆ. 2 ನೇ ಹಂತವೂ ಪ್ರಾರಂಭವಾಗುತ್ತಿದೆ. ಬೆಂಗಳೂರು ಏರೋಸ್ಪೇಸ್ ಕೇಂದ್ರವಾಗಿದೆ. ಇದು ಏರ್ ಶೋ ನಡೆಸಲು ಅತ್ಯಂತ ಸೂಕ್ತ ಸ್ಥಳ. ಭಾರತೀಯ ಏರೋಸ್ಪೇಸ್ ತಂತ್ರಜ್ಞಾನವನ್ನು ಇದರಿಂದ ಬಿಂಬಿಸಬಹುದಾಗಿದೆ. ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು ಎಂದು ತಿಳಿಸಿದರು.
ಗೌರವದ ಸಂಕೇತ:ಏರ್ ಇಂಡಿಯಾ ಶೋ ಆತಿಥ್ಯ ವಹಿಸುವುದು ಗೌರವದ ಸಂಕೇತವಾಗಿದೆ. ಏರ್ ಶೋ ಆಯೋಜಿಸುವುದು ಕರ್ನಾಟಕ ಮತ್ತು ಬೆಂಗಳೂರಿಗೆ ಅಭ್ಯಾಸವಾಗಿದೆ. ಏರೊ ಸ್ಪೇಸ್ ಇಕೋ ಸಿಸ್ಟಮ್ ಅಭಿವೃದ್ಧಿಪಡಿಸಿದ ನಮ್ಮ ಹಿರಿಯರಿಗೆ ಅಭಿನಂದಿಸಬೇಕು, ಪ್ರತಿ ಬಾರಿ ಆತಿಥ್ಯ ವಹಿಸಿದಾಗಲೂ ಅತ್ಯಂತ ಯಶಸ್ವಿಯಾಗಿ ರಕ್ಷಣಾ ಹಾಗೂ ಏರೋಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿಯೂ ಕಾರ್ಯಕ್ರಮಗಳು ರದ್ದಾದರೂ ನಾವು ಎರಡು ವರ್ಷಗಳ ಹಿಂದೆ ಏರ್ ಶೊ ಯಶಸ್ವಿಯಾಗಿ ಜರುಗಿತು. ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೆಮ್ಮೆಯಿಂದ ಪ್ರಸ್ತಾಪಿಸಿದರು.