ಬೆಂಗಳೂರು: ನನಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ನೀಡಲಾಗಿದ್ದು, ಉತ್ತಮವಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.
ಕೊಟ್ಟಿರುವ ಖಾತೆಯನ್ನು ಉತ್ತಮವಾಗಿ ನಿಭಾಯಿಸುವೆ: ಸಚಿವ ಡಾ. ನಾರಾಯಣಗೌಡ
2024 ರ ಪ್ಯಾರಿಸ್ ಮತ್ತು 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯುವ ಸಂಭಾವ್ಯ ಕರ್ನಾಟಕದ ಕ್ರೀಡಾಪಟುಗಳನ್ನು ಗುರುತಿಸಿ ಅಗತ್ಯ ಬೆಂಬಲ ಒದಗಿಸುವ ಮಿಷನ್ ಒಲಿಂಪಿಕ್ಸ್ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕ್ರೀಡಾಪಟುಗಳಿಗೆ ತರಬೇತಿ ನೀಡಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅನುವು ಮಾಡಿ ಕೊಡುತ್ತೇವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಕ್ರೀಡಾ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದ ಅಂಗವಾಗಿ 29 ಜಿಲ್ಲಾ ಕ್ರೀಡಾಂಗಣಗಳು, 117 ತಾಲೂಕು ಕ್ರೀಡಾಂಗಣಗಳು, 44 ಒಳಾಂಗಣ ಕ್ರೀಡಾಂಗಣಗಳು, 29 ಈಜುಕೊಳಗಳನ್ನು ನಿರ್ಮಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಜಿಲ್ಲಾ ಕ್ರೀಡಾಂಗಣಗಳನ್ನು ಹಾಗೂ 91 ತಾಲೂಕು ಕೇಂದ್ರಗಳಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸಬೇಕಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಸಾಧಕರಿಗೆ ನಗದು ಪುರಸ್ಕಾರ, ಕ್ರೀಡಾ ವಿದ್ಯಾರ್ಥಿ ವೇತನ, ಪ್ರಶಸ್ತಿಗಳು ಸೇರಿದಂತೆ ವಿವಿಧ ಕ್ರೀಡಾ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2020-21ನೇ ಸಾಲಿನಲ್ಲಿ ಇದುವರೆಗೆ 722 ಸಾಧಕ ಕ್ರೀಡಾಪಟುಗಳಿಗೆ ಒಟ್ಟು 10.20 ಕೋಟಿ ರೂ. ಪ್ರೋತ್ಸಾಹಧನವನ್ನು ಕ್ರೀಡಾಪಟುಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದರು.