ಬೆಂಗಳೂರು:ನಂಜನಗೂಡಿನ ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರರ ಆತ್ಮಹತ್ಯೆ ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಸಂತಾಪ ಸೂಚಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸಂಘ, ಕುಟುಂಬದಿಂದ ದೂರ ಉಳಿದು ನಿರಂತರ ಒತ್ತಡದಲ್ಲಿ ಎಲ್ಲಾ ಇಲ್ಲಗಳ ಹಾಗೂ ಅತ್ಯಂತ ಸಂಕೀರ್ಣ ವ್ಯವಸ್ಥೆಯ ನಡುವೆ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದ ಇಂತಹ ಕಾಯಕ ಜೀವಿಯನ್ನು ಕಳೆದುಕೊಂಡಿರುವುದು ವಿಷಾದನೀಯ.
ಈ ರೀತಿಯ ಅನಾಹುತಗಳು ನಡೆಯಲು ಕಾರಣ ಮತ್ತು ಅವು ಪುನಃ ಮರುಕಳಿಸದಂತೆ ಜಾಗೃತಿ ವಹಿಸುವುದರ ಜೊತೆಗೆ ವೈದ್ಯರನ್ನು ಬೆದರಿಸುವ, ಕಾನೂನಿನ ಗುಮ್ಮ ತೋರಿಸುವುದನ್ನು ಬಿಟ್ಟು ಸೌಹಾರ್ದಯುತವಾಗಿ ನಡೆಸಿಕೊಂಡು ಹೋಗಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಈ ಘಟನೆಯನ್ನು ಖಂಡಿಸುತ್ತಾ ಇದಕ್ಕೆ ಕಾರಣವಾದವರನ್ನು ಶಿಕ್ಷಿಸಬೇಕೆಂದು ಒತ್ತಾಯಿಸಿದೆ.
ಹೀಗಾಗಿ ಇಂದು ಮತ್ತು ನಾಳೆ ರಾಜ್ಯಾದ್ಯಂತ ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಭಾನುವಾರದಂದು ರಾತ್ರಿ 8 ಗಂಟೆಗೆ ದೀಪ ಬೆಳಗಿ ಈ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ.