ಹೋಟೆಲ್ ತಿಂಡಿ ತಿನಿಸಿನ ದರದಲ್ಲೂ ಏರಿಕೆ ಬೆಂಗಳೂರು:ಅಗತ್ಯ ವಸ್ತು ಬೆಲೆ, ನಂದಿನಿ ಹಾಲು ಉತ್ಪನ್ನ ದರ ಹೆಚ್ಚಳ ಬೆನ್ನಲ್ಲೆ ಹೋಟೆಲ್ ತಿಂಡಿ, ತಿನಿಸು, ಕಾಫಿ, ಟೀ ದರದಲ್ಲಿ ಇಂದು ದಿಢೀರ್ ಏರಿಕೆಯಾಗಿದೆ. ಹೋಟೆಲ್ ದರ ಏರಿಕೆ ಗ್ರಾಹಕರಿಗೆ ಬಿಸಿ ತಟ್ಟುತ್ತಿದೆ. ದರ ಏರಿಕೆ ಅನಿವಾರ್ಯವೆಂದು ಹೋಟೆಲ್ ಮಾಲೀಕರು ಸಮರ್ಥಿಸಿಕೊಳ್ಳುತ್ತಿದ್ದರೆ, ಬೆಲೆ ಹೆಚ್ಚಳಕ್ಕೆ ಗ್ರಾಹಕರು ಅಸಮಾನಧಾನಗೊಂಡಿದ್ದಾರೆ.
ಹೋಟೆಲ್ ದರ ಏರಿಕೆ ಗ್ರಾಹಕರ ಜೇಬಿಗೆ ಕತ್ತರಿ:ಇಂದು ಬೆಳಗ್ಗೆಯಿಂದ ಹೋಟೆಲ್ಗಳಲ್ಲಿನ ಬಿಸಿ ಬಿಸಿ ಚಹಾ, ರುಚಿ ರುಚಿಯಾದ ತಿಂಡಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾರಂಭಿಸಿದೆ. ಶೇ.5-10 ರಷ್ಟು ಪ್ರಮಾಣದಲ್ಲಿ ದರ ಹೆಚ್ಚಿಸಲಾಗಿದೆ. ಮಂಡೆ ಬಿಸಿ ಕಡಿಮೆ ಮಾಡಿಕೊಳ್ಳಲು ಕಾಫಿ ಟೀ ಕುಡಿದು ದರ ಹೆಚ್ಚಾಗಿರುವುದನ್ನು ನೋಡಿ ಮತ್ತೆ ತಲೆ ಬಿಸಿ ಮಾಡಿಕೊಂಡೇ ಗ್ರಾಹಕರು ತೆರಳುತ್ತಿದ್ದಾರೆ.
ದರ್ಶಿನಿಗಳಿಂದ ಹಿಡಿದು ಹೋಟೆಲ್ಗಳವರೆಗೂ ಎಲ್ಲಾ ಕಡೆ ದರ ಹೆಚ್ಚಳ ಮಾಡಲಾಗಿದೆ. ಗೂಡಂಗಡಿಗಳ ದರದಲ್ಲಿ ಕೆಲವು ಕಡೆ ಹೆಚ್ಚಿಸಿದ್ದರೆ ಮತ್ತೆ ಕೆಲವು ಕಡೆ ಹೆಚ್ಚು ಮಾಡಿಲ್ಲ. ಆದರೂ ಬಹುತೇಕ ಎಲ್ಲ ಹೋಟೆಲ್ಗಳಲ್ಲೂ ದರ ಏರಿಕೆ ಮಾಡಲಾಗಿದೆ.
ತಿಂಡಿ ತಿನಿಸು, ಚಹಾ ಕಾಫಿ ದರದಲ್ಲಿ 3 ರಿಂದ 5 ರೂ ಹೆಚ್ಚಳ: ಇನ್ನು ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆಯನ್ನು ಹೋಟೆಲ್ ಮಾಲೀಕರು ಸಮರ್ಥಿಸಿಕೊಂಡಿದ್ದಾರೆ. ಹೋಟೆಲ್ ಉದ್ಯಮ ಉಳಿಸಲು ಅನಿವಾರ್ಯ ಎಂದಿದ್ದಾರೆ. ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ನಿಸರ್ಗ ಗ್ರ್ಯಾಂಡ್ ಹೋಟೆಲ್ ಮಾಲೀಕ ಕೃಷ್ಣರಾಜ್, ಹೋಟೆಲ್ಗೆ ಬೇಕಾದ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ.
ಹೋಟೆಲ್ ತಿಂಡಿ ತಿನಿಸಿನ ದರದಲ್ಲೂ ಏರಿಕೆ ಬೇಳೆ ಕಾಳು, ತರಕಾರಿ, ಕಾಫಿ ಪುಡಿ, ಟೀ ಪುಡಿ,ಜೀರ್ಗಿ,ಬ್ಯಾಡಗಿ ಮೆಣಸು ಎಲ್ಲ ದರ ಹೆಚ್ಚಾಗಿದೆ, ಇಂದಿನಿಂದ ಹಾಲು, ಮೊಸರು, ತುಪ್ಪದ ದರವೂ ಹೆಚ್ಚಾಗಿದೆ. ಆದ್ದರಿಂದ ಗ್ರಾಹಕರ ಹಿತ ಮತ್ತು ನಮ್ಮ ಉದ್ಯಮವೂ ಉಳಿಯಬೇಕು ಎನ್ನುವ ಉದ್ದೇಶದಿಂದ ತಿಂಡಿ ತಿನಿಸು, ಚಹಾ ಕಾಫಿ ದರದಲ್ಲಿ ಕನಿಷ್ಠ 3 ರಿಂದ 5 ರೂ. ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ದರ ಪರಿಷ್ಕರಣೆ ವಿಚಾರದಲ್ಲಿ ಹೋಟೆಲ್ ಮಾಲೀಕರ ಸಂಘದ ಒಪ್ಪಿಗೆ ಪ್ರಶ್ನೆ ಬರಲ್ಲ, ಅವರವರ ಬಂಡವಾಳಕ್ಕೆ ತಕ್ಕ ರೀತಿ ದರ ಹೆಚ್ಚಳ ಮಾಡಿರುತ್ತಾರೆ. ಮಾಲೀಕರ ಸಂಘದಲ್ಲಿ ಸಭೆ ನಡೆದಿದ್ದಾಗ, ದರ ಪರಿಷ್ಕರಣೆ ವಿಚಾರದ ಚರ್ಚೆ ಆಗಲಿದೆ. ಆದರೆ ಅವರವರ ಬಂಡವಾಳ ಹೂಡಿಕೆಗೆ ತಕ್ಕ ರೀತಿ ದರ ಹೆಚ್ಚಿಸಲಾಗುತ್ತದೆ.
ಗ್ರಾಹಕರು ಕೂಡ ದಿನಸಿ, ತರಕಾರಿ ಖರೀದಿಸುತ್ತಾರೆ. ಹಾಗಾಗಿ ಅವರಿಗೂ ಇದರ ಮಾಹಿತಿ ಇರಲಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಮನವರಿಕೆ ಆಗಿದೆ. ನಮ್ಮ ಸಮಸ್ಯೆಯೂ ಅವರಿಗೆ ಅರ್ಥವಾಗಿದೆ. ನಮ್ಮ ವಹಿವಾಟಿನ ಮೇಲೆ ದರ ಏರಿಕೆ ಪರಿಣಾಮ ಬೀರಲ್ಲ. ಕಾಲ ಕಾಲಕ್ಕೆ ತಕ್ಕಂತೆ ದರದಲ್ಲಿ ಬದಲಾಗಲಿದೆ, ಅಕ್ಕಿ, ಬೇಳೆ ಬೆಲೆ ತುಂಬಾ ಹೆಚ್ಚಿದೆ, ಉದ್ಯಮ ಉಳಿಯಲು ದರ ಏರಿಕೆ ಅನಿವಾರ್ಯ. ಇದಕ್ಕೆ ಗ್ರಾಹಕರು ಸ್ಪಂದಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾರಿಗೋ ಫ್ರೀ ಕೊಟ್ಟು ಇನ್ನೊಬ್ಬರಿಗೆ ಬರೆ :ದರ ಹೆಚ್ಚಳಕ್ಕೆ ಗ್ರಾಹಕರು ಗರಂ ಆಗಿದ್ದಾರೆ. ಹೋಟೆಲ್ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಗ್ರಾಹಕ ಮಂಜುನಾಥ್, ನಾವೆಲ್ಲಾ ತಿಂಗಳ ಖರ್ಚಿಗೆ ವ್ಯವಸ್ಥೆ ಮಾಡಿಕೊಂಡಿರುತ್ತೇವೆ, ಎಷ್ಟು ಖರ್ಚು ಮಾಡಬೇಕು ಎಂದು ಯೋಜನೆ ರೂಪಿಸಿಕೊಂಡಿರುತ್ತೇವೆ. ಈಗ 12 ರೂ. ಕಾಫಿಗೆ 17 ರೂ. ಕೊಡಬೇಕು. ನಾವು ಎಲ್ಲಿಂದ ಕೊಡಬೇಕು, ಕಾಫಿ ಟೀ ಕುಡಿಯುವುದೇ ಬಿಡಬೇಕಾ? ಊಟ, ತಿಂಡಿ ದರ ಜಾಸ್ತಿಯಾಗಿದೆ. ಯಾರಿಗೋ ಫ್ರೀ ಕೊಟ್ಟು ಎಲ್ಲ ಹೊರೆ ಜನರ ಮೇಲೆ ಹಾಕಿದರೆ ನಾವೇನು ಮಾಡಬೇಕು? ಬೆಳಗ್ಗೆ ಮನೆಯಲ್ಲಿ ಟೀ ಕುಡಿದು, ಸಂಜೆ ಮತ್ತೆ ಬಂದು ಮತ್ತೆ ಮನೆಯಲ್ಲೇ ಕುಡಿಯಬೇಕು, ಮಧ್ಯಾಹ್ನ ತಲೆನೋವು ಬಂದರೂ, ಕಾಫಿ, ಟೀ ಕುಡಿಯಬಾರದು. ಸ್ನೇಹಿತರ ಜೊತೆಯೂ ಕಾಫಿ ಟೀಗೆ ಹೋಗಬಾರದು ಅಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಹಕಿ ರೇಣುಕಾ ಮಾತನಾಡಿ, ಹೋಟೆಲ್ ತಿಂಡಿ ತಿನಿಸಿ ದರ ಹೆಚ್ಚಳ ಜನಸಾಮಾನ್ಯರಿಗೆ ಹೊರೆಯಾಗಲಿದೆ, ಈಗಾಗಲೇ ಪ್ರತಿಯೊಂದಕ್ಕೂ ತೆರಿಗೆ ಹಾಕಿದ್ದಾರೆ. ಆ ನಷ್ಟವನ್ನು ಸರ್ಕಾರ ಬೇರೆ ರೂಪದಲ್ಲಿ ಭರಿಸಿಕೊಳ್ಳುತ್ತಿದೆ. ಅದಕ್ಕೆ ಹಾಲಿನ ದರ ಹೆಚ್ಚಿಸಿದೆ. ಈ ರೀತಿ ಹಾಲಿನ ದರ ಹೆಚ್ಚಳ ಸರಿಯಲ್ಲ. ಮಕ್ಕಳಿಗೆ ಹಾಲು ಬೇಕು. ಬೆಳಗ್ಗೆ ಎದ್ದ ತಕ್ಷಣ ಮೊದಲು ಬೇಕಾಗುವುದೇ ಹಾಲು. ಅದರ ದರವನ್ನೇ ಹೆಚ್ಚಿಸಿದ್ದಾರೆ, ಇದು ತುಂಬಾ ಕಷ್ಟ. ಹಾಲಿನ ಉತ್ಪನ್ನಗಳೆಲ್ಲವೂ ಹೆಚ್ಚಾಗಿರುವುದು ಗೃಹಿಣಿಯರಿಗೆ ಕಷ್ಟವಾಗಲಿದೆ.
ನಗರದಲ್ಲಿ ಮನೆ ನಡೆಸುವುದು ಕಷ್ಟ, ಸಂಸಾರ ನಡೆಸುವುದು ಕಷ್ಟ, ಬಡವರು ಏನು ಮಾಡಬೇಕು? ಇದು ಸರಿಯಲ್ಲ, ನಾವು ಕೆಲಸ ಅಂತಾ ಹೊರಗೆ ಬಂದಿದ್ದೇವೆ. ಮನೆಗೆ ಹೋಗುವಷ್ಟು ಸಮಯ ಇರಲ್ಲ, ಹೋಟೆಲ್ಗೆ ಹೋಗಲೇಬೇಕು ಎಂದರು.
ಇದನ್ನೂಓದಿ:ತರಕಾರಿ, ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್: ಹೋಟೆಲ್ ತಿಂಡಿ ದರ ಹೆಚ್ಚಳಕ್ಕೆ ನಿರ್ಧಾರ