ಬೆಂಗಳೂರು: ನೂತನ ರಾಜ್ಯಾಧ್ಯಕ್ಷ ಮತ್ತು ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಸಂಬಂಧ ವೀಕ್ಷಕರು ಅಭಿಪ್ರಾಯ ಸಂಗ್ರಹ ಮಾಡಿದ್ದು, ಬಹುತೇಕ ಇಂದು ರಾತ್ರಿಯೇ ಪ್ರತಿಪಕ್ಷ ನಾಯಕರ ಹೆಸರು ಪ್ರಕಟವಾಗಲಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಆರ್.ಅಶೋಕ್ ಭೇಟಿ ನೀಡಿದರು. ವೀಕ್ಷಕರಾಗಿ ಬಂದಿರುವ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಅವರೊಂದಿಗೆ ಚರ್ಚೆ ನಡೆಸಿದರು. ಇದೇ ವೇಳೆ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ತಮ್ಮ ಅಭಿಪ್ರಾಯ ಕೂಡ ತಿಳಿಸಿದರು.
ಹೈಕಮಾಂಡ್ ವೀಕ್ಷಕರ ಭೇಟಿ ನಂತರ ಸುದ್ದಿಗಾರರ ಜೊತೆ ಮಾತನಾಡಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಾಕರಿಸಿದರು, ಬೊಮ್ಮಾಯಿ ಹಿಂದೆಯೇ ಆಗಮಿಸಿದ ಅಶೋಕ್ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದ ಅಧ್ಯಕ್ಷರು ಮತ್ತು ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಸಂಬಂಧ ನಾವು ನಮ್ಮ ಅಭಿಪ್ರಾಯಗಳನ್ನು ನೀಡಿದ್ದೇವೆ, ಯಾರ್ಯಾರು ಆಕಾಂಕ್ಷಿಗಳಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ನಾವು ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ ಇಂದು ರಾತ್ರಿ 12 ಗಂಟೆ ಒಳಗೆ ತೀರ್ಮಾನ ಪ್ರಕಟವಾಗಲಿದೆ ಎಂದರು.
ಶಾಸಕಾಂಗ ಸಭೆ ನಡೆಸದೇ ಪ್ರತಿಪಕ್ಷ ನಾಯಕರ ಆಯ್ಕೆ ಕಸರತ್ತು: ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ ಮನ್ಸುಖ್ ಮಾಂಡವಿಯಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಶಾಸಕಾಂಗ ಸಭೆ ನಡೆಸಿ ಅಭಿಪ್ರಾಯ ಆಲಿಸದೇ ಆಯ್ದ ಹಿರಿಯರ ಜೊತೆ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಶಾಸಕಾಂಗ ಸಭೆ ನಡೆಸಿದರೆ ಹೊಸದಾಗಿ ಆಯ್ಕೆಯಾದ ಶಾಸಕರ ಅಭಿಪ್ರಾಯ ಕೂಡ ಪರಿಗಣಿಸಬೇಕಾಗಲಿದೆ, ಇದರಿಂದ ಆಯ್ಕೆ ವಿಚಾರದಲ್ಲಿ ಮತ್ತೆ ಸಮಸ್ಯೆ ಎದುರಾಗಲಿದೆ ಎನ್ನುವ ಕಾರಣಕ್ಕೆ ಪ್ರಮುಖರ ಅಭಿಪ್ರಾಯ ಆಲಿಸಿ ನಂತರ ಶಾಸಕಾಂಗ ಪಕ್ಷದ ಸಭೆ ನಡೆಸಿ ಹೈಕಮಾಂಡ್ ನಿರ್ಧಾರಿತ ಹೆಸರು ಪ್ರಸ್ತಾಪಿಸಿ ಶಾಸಕಾಂಗ ಪಕ್ಷದ ಸಭೆಯ ಅನುಮೋದನೆ ಪಡೆಯಲಾಗುತ್ತದೆ.