ಬೆಂಗಳೂರು:ಅನರ್ಹ ಶಾಸಕರಿಗೆ ಅನ್ಯಾಯವಾಗದ ರೀತಿಯಲ್ಲಿ ಬಿಜೆಪಿ ನೋಡಿಕೊಳ್ಳಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳುವ ಮೂಲಕ ಅನರ್ಹ ಶಾಸಕರಿಗೆ ಅಥವಾ ಅವರು ಹೇಳಿದವರಿಗೆ ಟಿಕೆಟ್ ಕೊಡುವ ಸುಳಿವನ್ನು ನೀಡಿದ್ದಾರೆ.
ಇಂದು ಸಿಎಂ ಬಿ. ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ಬಿಜೆಪಿ ಅವರು, ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಕೊರತೆ ಇದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಸಿಎಂ ಜೊತೆ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿದ್ದೇನೆ. ಈ ವೇಳೆ ಪಕ್ಷ ಸಂಘಟನೆ ವಿಚಾರವಾಗಿ, ಮಂಡಲ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಆಯ್ಕೆ ಪ್ರಕ್ರಿಯೆ ಜೊತೆಗೆ 15 ಕ್ಷೇತ್ರಗಳ ಉಪ ಚುನಾವಣೆಗೆ ತಯಾರಿ ಕಾರ್ಯಗಳಿಗೆ ವೇಗ ನೀಡುವ ಕುರಿತು ಮಾತುಕತೆ ನಡೆಸಿದ್ದೇವೆ ಎಂದರು.
ಬಿಎಸ್ವೈ ಮಾರ್ಗದರ್ಶನದಲ್ಲಿ ಪಕ್ಷ ನಡೆಯುತ್ತಿದೆ:
ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿಯೇ ಎಲ್ಲವೂ ನಡೆಯುತ್ತಿದೆ. ಅವರ ಅನುಭವ ಮತ್ತು ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮತ್ತು ಉಪಚುನಾವಣೆಗೆ ತಯಾರಿ ನಡೆಯುತ್ತಿದೆ. ಪಕ್ಷದಲ್ಲಿ ಒಬ್ಬರಿಗೆ ಒಂದು ಸ್ಥಾನ ಎನ್ನುವ ನಿಯಮದಂತೆ ಯಡಿಯೂರಪ್ಪನವರು ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟರು. ಹಾಗಾಗಿ ನಾನು ರಾಜ್ಯಾಧ್ಯಕ್ಷನಾದೆ. ಅದೇ ರೀತಿ ಸಿ. ಟಿ. ರವಿ ಸೇರಿದಂತೆ ಇತರರು ತಾವು ಮೊದಲಿಗೆ ವಹಿಸಿಕೊಂಡಿದ್ದ ಜವಾಬ್ದಾರಿಗಳನ್ನು ಬಿಟ್ಟುಕೊಟ್ಟರು. ಆ ಸ್ಥಾನಗಳಿಗೆ ಪಕ್ಷದ ಇತರೆ ಮುಖಂಡರಿಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಖಾಲಿ ಸ್ಥಾನಕ್ಕೆ ಸುರಾನಾ ಮತ್ತು ಭಾನುಪ್ರಕಾಶ್ ನೇಮಕ ಮಾಡಲಾಯಿತು. ಮುಖ್ಯಮಂತ್ರಿ ಅವರ ಕೋರಿಕೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಟೀಲ್ ಸ್ಪಷ್ಟಪಡಿಸಿದರು.
17 ರಾಜ್ಯಗಳಲ್ಲಿ ನೆರೆಹಾನಿ ಆಗಿದೆ. ಎಲ್ಲವನ್ನೂ ನೋಡಿ ಕರ್ನಾಟಕಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನು ಪ್ರಧಾನಿ ನೀಡಿದ್ದಾರೆ. ಆದರೂ ತಕ್ಷಣಕ್ಕೆ ರಾಜ್ಯಕ್ಕೆ ಬೇಕಿರುವ ಪರಿಹಾರ ಕಾರ್ಯವನ್ನು ನಮ್ಮ ಸರ್ಕಾರ ಕೊಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ರು.