ಬೆಂಗಳೂರು : ಬೀದರ್ ಜಿಲ್ಲಾ ಉತ್ಸವವನ್ನು 2023ರ ಜನವರಿ 6, 7 ಹಾಗೂ 8 ರಂದು ಆಯೋಜಿಸಿರುವುದರಿಂದ ಅದೇ ಸಮಯದಲ್ಲಿ ಹಾವೇರಿಯಲ್ಲಿ ಆಯೋಜಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬೀದರ್ ಜಿಲ್ಲಾಡಳಿತಕ್ಕೆ ಜಿಲ್ಲಾ ಉತ್ಸವವನ್ನು ಮುಂದೂಡುವಂತೆ ಸೂಚಿಸಬೇಕೆಂದು ಅನೇಕ ಕನ್ನಡಪರ ಸಂಘ-ಸಂಸ್ಥೆಗಳು, ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೋರಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾನು ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿಯವರೊಡನೆ ಇಂದು ದೂರವಾಣಿ ಮೂಲಕ ಮಾತನಾಡಿ, ಕನ್ನಡಿಗರೆಲ್ಲರ ಅಸ್ಮಿತೆಯ ಪ್ರತೀಕವಾಗಿರುವ ಸಾಹಿತ್ಯ ಸಮ್ಮೇಳನ ನಡೆದು ಎರಡು ವರ್ಷಗಳಾಗಿವೆ. 2023ರಲ್ಲಿ ನಡೆಸಬೇಕಾಗಿದ್ದ ಹಾವೇರಿ ಸಮ್ಮೇಳನವು ಕೊರೋನಾ ಹಿನ್ನೆಲೆಯಲ್ಲಿ ಮುಂದೂಡುತ್ತಾ ಬರಲಾಗಿತ್ತು. ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಕನ್ನಡದ ಉತ್ಸವವಾದ ಸಾಹಿತ್ಯ ಸಮ್ಮೇಳನದಲ್ಲಿ ಸಮಗ್ರ ಕನ್ನಡಿಗರು ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.
ಜೊತೆಗೆ ಭಾವೈಕ್ಯತೆ, ಸಂಸ್ಕೃತಿ, ಪರಂಪರೆಗೆ ಹೆಸರುವಾಸಿಯಾದ ಹಾಗೂ ಮುಖ್ಯಮಂತ್ರಿಗಳ ಮತ್ತು ನನ್ನ ತವರು ಜಿಲ್ಲೆಯಾದ ಹಾವೇರಿಯಲ್ಲಿ ಜರುಗಲಿರುವ ಈ ಅಕ್ಷರ ಜಾತ್ರೆಯನ್ನು ಐತಿಹಾಸಿಕ ದಾಖಲೆಯಾಗಿ ಉಳಿಯುವಂತೆ ಮಾಡುವ ಉದ್ದೇಶವನ್ನು ಪರಿಷತ್ತು ಹೊಂದಿದ್ದು, 2023ರ ಜನವರಿ 6, 7 ಹಾಗೂ 8 ರಂದು ಮೂರು ದಿನಗಳ ಕಾಲ ಸಮ್ಮೇಳನವನ್ನು ನಡೆಸಲು ದಿನಾಂಕಗಳನ್ನು ಸರ್ಕಾರದ ವತಿಯಿಂದಲೇ ಘೋಷಿಸಿ, ಆಚರಣೆಗಾಗಿ ಸರ್ವ ಸಿದ್ಧತೆಗಳನ್ನು ಕೈಗೊಂಡಿದ್ದು, ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದರಿಂದ ಬೀದರ್ ಜಿಲ್ಲಾದ್ಯಂತ ಭಾಗವಹಿಸುವ ಕನ್ನಡಾಭಿಮಾನಿಗಳಿಗೆ ಅನುಕೂಲವಾಗುವಂತೆ ಬೀದರ್ ಜಿಲ್ಲಾ ಉತ್ಸವನ್ನು ಮುಂದೂಡಿ ಸಹಕರಿಸಬೇಕು ಎಂದು ಕೋರಿಕೊಂಡಿರುವುದಾಗಿ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ದುರಂತವೆಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಮನವಿಯನ್ನು ಧಿಕ್ಕರಿಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾವೇರಿಯಲ್ಲಿ ಜರುಗಲಿರುವ ಸಾಹಿತ್ಯ ಸಮ್ಮೇಳನಕ್ಕೆ ಬೀದರ್ ಜಿಲ್ಲೆಯಿಂದ 100 ಜನರೂ ಹೋಗುವುದಿಲ್ಲ. ಹಾಗಾಗಿ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ಅಸಡ್ಡೆಯ ನುಡಿಗಳನ್ನಾಡುವ ಮೂಲಕ ಕನ್ನಡದ ಸಮ್ಮೇಳನವನ್ನು ಅವಮಾನ ಮಾಡಿದ್ದಾರೆ. ಈ ಅಸಡ್ಡೆಯ ಮನೋಭಾವನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ತೀವ್ರವಾಗಿ ಖಂಡಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.