ಬೆಂಗಳೂರು: ಈ ಬಾರಿ ರಾಜ್ಯದಲ್ಲಿ 50 ಲಕ್ಷ ಬಿಜೆಪಿ ಸದಸ್ಯತ್ವವನ್ನು ಮಾಡಲಾಗುವುದು. ಕಾಲಮಿತಿಯಲ್ಲಿಯೇ ಈ ಗುರಿಯನ್ನು ತಲುಪಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಭರವಸೆ ನೀಡಿದ್ದಾರೆ.
ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ ತಯಾರಿಗೆ ಚಾಲನೆ ನೀಡಿದ ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಇಂದು ದೇಶದ ಎಲ್ಲಾ ರಾಜ್ಯಗಳ ಮುಖಂಡರು ಮತ್ತು ಸದಸ್ಯತ್ವ ಅಭಿಯಾನದ ರಾಜ್ಯ ಉಸ್ತುವಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದ ಬಿಜೆಪಿ ಮುಖಂಡರು ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಕೂಡಲೇ ಸದಸ್ಯತ್ವ ಅಭಿಯಾನಕ್ಕೆ ವಿಶೇಷ ಒತ್ತು ನೀಡಿರುವ ನಡ್ಡಾ, ಇರುವ ಕಾಲಮಿತಿಯಲ್ಲಿ ಸದಸ್ಯತ್ವ ಅಭಿಯಾನ ನಡೆಸುವುದರ ಜೊತೆಗೆ ಶಕ್ತಿಕೇಂದ್ರದ ಮಟ್ಟದವರೆಗೂ ಸದಸ್ಯತ್ವ ನೋಂದಣಿ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದರು. ಇನ್ನು ವಿಶೇಷವಾಗಿ ಸದಸ್ಯತ್ವದ ಪ್ರಮಾಣ ಕಡಿಮೆಯಾಗಿರುವ ಪ್ರದೇಶಗಳಲ್ಲಿ ಹೆಚ್ಚು ಒತ್ತು ನೀಡುವಂತೆ ಸೂಚಿಸಿದರು.
ಮಧ್ಯಪ್ರದೇಶದಿಂದ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದ ಸದಸ್ಯತ್ವ ಅಭಿಯಾನದ ರಾಷ್ಟ್ರೀಯ ಉಸ್ತುವಾರಿ ಶಿವರಾಜ್ ಸಿಂಗ್ ಚೌವ್ಹಾಣ್, ಪಕ್ಷದ ಸದಸ್ಯತ್ವವು ಸರ್ವವ್ಯಾಪಿ ಮತ್ತು ಸರ್ವ ಸ್ಪರ್ಶಿಯಾಗಬೇಕು, ಒಂದು ವಾರದ ಕಾಲ ಸದಸ್ಯತ್ವ ಅಭಿಯಾನಕ್ಕಾಗಿ ವಿಸ್ತಾರಕರನ್ನು ನಿಯೋಜಿಸಬೇಕು, ಪಕ್ಷವು ಆಡಳಿತದಲ್ಲಿ ಇಲ್ಲದ ರಾಜ್ಯಗಳಲ್ಲೂ ಸದಸ್ಯತ್ವ ನೋಂದಣಿಗೆ ಮಹತ್ವ ನೀಡಬೇಕೆಂದು ಹೇಳಿದರು. ದೇಶಾದ್ಯಂತ ಸದಸ್ಯತ್ವದ ಆಂದೋಲನವು ಜುಲೈ 6 ರಂದು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದಂದು ಆರಂಭವಾಗಲಿದ್ದು, ಆಗಸ್ಟ್ 11 ಕ್ಕೆ ಮುಕ್ತಾಯವಾಗುತ್ತದೆ ಎಂದು ತಿಳಿಸಿದರು.
ಇನ್ನು ಬೆಂಗಳೂರಿನಿಂದ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮಾತನಾಡಿ, ಕಳೆದ ಬಾರಿ ರಾಜ್ಯದಲ್ಲಿ 80 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿತ್ತು. ಈ ಬಾರಿ ಇನ್ನೂ 50 ಲಕ್ಷ ಸದಸ್ಯರನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು. ರಾಜ್ಯದಲ್ಲೂ ಹಿನ್ನೆಡೆ ಆಗಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಗಮನ ನೀಡಲಿದ್ದೇವೆ. ರಾಜ್ಯದಲ್ಲಿ ಪಕ್ಷದ ಐ.ಟಿ ಸೆಲ್ ಸಕ್ರಿಯವಾಗಿದ್ದು, ಗುರಿ ತಲುಪುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.