ಕರ್ನಾಟಕ

karnataka

ETV Bharat / state

ಗ್ಯಾರಂಟಿ ಯೋಜನೆಗಳ ಸ್ಪಷ್ಟತೆ, ಹಣಕಾಸು ಕ್ರೋಢೀಕರಣದ ಮಾಹಿತಿ ನೀಡಿ: ಎನ್.ರವಿಕುಮಾರ್ ಆಗ್ರಹ - ಬೆಂಗಳೂರು ಲೇಟೆಸ್ಟ್​​ ನ್ಯೂಸ್​​

ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಖರ್ಚಾಗಲಿದೆ?. 5 ಗ್ಯಾರಂಟಿ ಯೋಜನೆಗಳಿಗೆ ಸರ್ಕಾರಕ್ಕೆ ಎಷ್ಟು ಖರ್ಚು ಬರಲಿದೆ ಎಂಬುದನ್ನು ತಿಳಿಸಬೇಕು - ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್.

N Ravi Kumar
ಎನ್.ರವಿಕುಮಾರ್

By

Published : Jun 3, 2023, 6:54 AM IST

ಬೆಂಗಳೂರು: ಗೃಹಲಕ್ಷ್ಮಿ, ಗೃಹಭಾಗ್ಯ, ಅನ್ನಭಾಗ್ಯ ಮತ್ತು ಯುವನಿಧಿಯು ಸಮಸ್ಯೆಗಳನ್ನು ಸೃಷ್ಟಿಸಿದೆ. ಇದರಲ್ಲಿ ಸ್ಪಷ್ಟತೆ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಸಮಸ್ಯೆಗಳನ್ನೇ ನಿರ್ಮಿಸಿದೆ ಎಂದು ಅವರು ಆಕ್ಷೇಪಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಖರ್ಚಾಗಲಿದೆ?. 5 ಗ್ಯಾರಂಟಿ ಯೋಜನೆಗಳಿಗೆ ಸರ್ಕಾರಕ್ಕೆ ಎಷ್ಟು ಖರ್ಚು ಬರಲಿದೆ?, ಅದಕ್ಕಾಗಿ ಹೆಚ್ಚುವರಿ ತೆರಿಗೆ ಹಾಕುವಿರಾ?, ಹಾಲಿ ನೀರಾವರಿ, ರಸ್ತೆ ನಿರ್ಮಾಣ, ಮೆಟ್ರೋ ಮತ್ತಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ತೆಗೆದು ಬಳಸಿಕೊಳ್ಳುವಿರಾ? ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಅವರ ಸರ್ಕಾರ ಈ ಹಿಂದೆ ಘೋಷಿಸಿದ್ದ ಗ್ಯಾರಂಟಿಯ ಕುರಿತು ಕ್ಯಾಬಿನೆಟ್ ಸಭೆಯ ಬಳಿಕ ವಿವರವಾದ ಯೋಜನೆಯನ್ನು ಪ್ರಕಟಿಸಿದ್ದು, ಅದನ್ನು ಸ್ವಾಗತಿಸುತ್ತೇನೆ. ಇದರಲ್ಲಿ ಆಗಿರುವ ಸಮಸ್ಯೆ ಏನೆಂದರೆ 200 ಯೂನಿಟ್ ಪ್ರತಿ ಮನೆಗೆ ವಿದ್ಯುತ್ ಉಚಿತ ಎಂದಿದ್ದಾರೆ. ಉದಾ: 70 ಯೂನಿಟ್ ಬಳಸುವವರಿಗೆ ಹೆಚ್ಚುವರಿ 10 ಯೂನಿಟ್ ಮಾತ್ರ ಎಂದಿದ್ದಾರೆ. ಹಾಗಿದ್ದರೆ 200 ಯೂನಿಟ್ ಎಂದು ಪ್ರಕಟಿಸಿದ್ದು ಯಾಕೆ?. 200 ಯೂನಿಟ್ ಬಳಸಲು ಅವಕಾಶ ಕೊಡಬೇಕು. 201 ಯೂನಿಟ್ ಬಳಸಿದರೆ ಒಂದು ಯೂನಿಟ್‍ಗೆ ಹಣ ಪಡೆಯಬೇಕು. ಈ ವಿಷಯದಲ್ಲಿ ದ್ವಂದ್ವ ಸಲ್ಲದು ಎಂದಿದ್ದಾರೆ.

ಯುವ ನಿಧಿ ವಿಚಾರದಲ್ಲಿ 2022-23ರಲ್ಲಿ ಪಾಸಾದ ಪದವೀಧರರಿಗೆ 2 ವರ್ಷ ಅಂದರೆ 24 ತಿಂಗಳ ಕಾಲ 3 ಸಾವಿರ ಮತ್ತು ಡಿಪ್ಲೊಮಾ ಆದವರಿಗೆ 1,500 ಕೊಡುವುದಾಗಿ ಹೇಳಿದ್ದಾರೆ. ಆಗ ತಾನೇ ಪಾಸಾದವ ನಿರುದ್ಯೋಗಿ ಹೇಗಾಗುತ್ತಾನೆ? ಪಾಸಾಗಿ ಉದ್ಯೋಗ ಸಿಗದೆ ಒಂದು ವರ್ಷ ಆದವರು ನಿರುದ್ಯೋಗಿ ಎಂದು ಪರಿಗಣಿಸಬೇಕಲ್ಲವೇ?. ನಿಜಕ್ಕೂ ಅವರಿಗೆ ಕೊಡಬೇಕಿತ್ತು. ಅವರಿಗೂ ಭತ್ಯೆ ನೀಡಬೇಕು. ಇದು ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಉತ್ತೀರ್ಣರಾದವರಲ್ಲಿ ನಿರಾಶೆ ಮೂಡಿಸಿದೆ ಎಂದು ಸಿದ್ದರಾಮಯ್ಯರವರಿಗೆ ತಿಳಿಸಲು ಬಯಸುವುದಾಗಿ ಹೇಳಿಕೆ ನೀಡಿದ್ದಾರೆ.

'ಯಜಮಾನಿ' ನಿರ್ಧಾರದ ಕುರಿತು ಸ್ಪಷ್ಟಪಡಿಸಿ: ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳೂ 2 ಸಾವಿರ ಕೊಡುವುದಾಗಿ ಪ್ರಕಟಿಸಿದ್ದಾರೆ. ಇದು ಸ್ವಾಗತಾರ್ಹ. ಮನೆಯ ಒಡತಿ - ಯಜಮಾನಿಯನ್ನು ನಿರ್ಧರಿಸುವುದು ಹೇಗೆ?. ಒಂದು ಮನೆಯಲ್ಲಿ ಇಬ್ಬರೋ ಮೂವರೋ ಸೊಸೆಯಂದಿರು, ಅತ್ತೆ ಇದ್ದಾಗ ಯಜಮಾನಿ ಯಾರೆಂದು ನಿರ್ಧರಿಸುವುದು ಯಾರು?. ಇದನ್ನು ನಿರ್ಧಾರ ಮಾಡುವುದು ಹೇಗೆ ಎಂದು ಕೇಳಿದರು. ಇದು ಸಮಸ್ಯೆ ನಿರ್ಮಾಣ ಮಾಡಲಿದೆ. ವೈಮನಸ್ಸಿಗೆ ಕಾರಣವಾಗಲಿದೆ. 'ಯಜಮಾನಿ' ನಿರ್ಧಾರದ ಕುರಿತು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದಾರೆ.

ಅನ್ನಭಾಗ್ಯದಲ್ಲಿ 10 ಕೆ.ಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕೇಂದ್ರವು ಈಗಾಗಲೇ 5 ಕೆ.ಜಿ ಅಕ್ಕಿಯನ್ನು ದೇಶ- ರಾಜ್ಯದ ಜನರಿಗೆ ಕೊಡುತ್ತಿದೆ. ಆ 5 ಕೆಜಿ ಅಕ್ಕಿ ಬಿಟ್ಟು ಹೆಚ್ಚುವರಿ ಕೊಡುವಿರಾ?, ಅಕ್ಕಿ ಅಂತಲೂ ಹೇಳುತ್ತಿಲ್ಲ. ಆಹಾರ ಧಾನ್ಯ ಎನ್ನುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ. ಅಕ್ಕಿ ಎನ್ನುತ್ತಿದ್ದವರು ಈಗ ಪತ್ರಿಕಾಗೋಷ್ಠಿಯಲ್ಲಿ ಆಹಾರಧಾನ್ಯ ಎನ್ನುತ್ತಿರುವುದು ಯಾಕೆ? ಅಂದರೆ ನೀವು ರಾಗಿ, ಜೋಳ ಕೊಡುವ ಯೋಜನೆ ಇದೆಯೇ ಎಂದು ರವಿ ಕುಮಾರ್​ ಪ್ರಶ್ನಿಸಿದ್ದಾರೆ.

33 ರೂ ಅಕ್ಕಿಗೆ ಬದಲು ಆಹಾರಧಾನ್ಯ ಕೊಟ್ಟು ಸರ್ಕಾರಕ್ಕೆ ಉಳಿತಾಯ ಮಾಡಲು ಹೊರಟಿದ್ದೀರಾ?. ಇದಕ್ಕೆ ಕೇಂದ್ರ ಸರ್ಕಾರದ 5 ಕೆ.ಜಿ ಇದೆ ಎಂದು ಸ್ಪಷ್ಟಪಡಿಸಬೇಕು. ಇನ್ನೈದು ಕೆ.ಜಿ ರಾಜ್ಯದ್ದು ಎಂದು ತಿಳಿಸಬೇಕು. ನೀವೇ ಕೊಟ್ಟಿರುವುದು 5 ಕೆ.ಜಿ ಎಂದು ತಿಳಿಸಿ ಎಂದು ಆಗ್ರಹಿಸಿದ್ದಾರೆ. ಇನ್ನು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸ್ವಾಗತಾರ್ಹ. ಇದರೊಳಗೆ ಅಂತಹ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಗ್ಯಾರಂಟಿ ವಿಚಾರದಲ್ಲಿ ಮಾತು ತಪ್ಪಿದರೆ, ಕಾಂಗ್ರೆಸ್ ವಿರುದ್ಧ ವಚನಭ್ರಷ್ಟ ಪೋಸ್ಟರ್ ರಿಲೀಸ್: ಎನ್.ರವಿಕುಮಾರ್

ABOUT THE AUTHOR

...view details