ಬೆಂಗಳೂರು: 'ನನ್ನ ಮಣ್ಣು ನನ್ನ ದೇಶ' ದೇಶಪ್ರೇಮ ಬಿಂಬಿಸುವ ಕಾರ್ಯಕ್ರಮ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ ವಿ ಸದಾನಂದ ಗೌಡ ತಿಳಿಸಿದರು. ನಗರದ ಕಾಡಮಲ್ಲೇಶ್ವರ ದೇವಸ್ಥಾನದಲ್ಲಿ ಇಂದು 'ನನ್ನ ಮಣ್ಣು ನನ್ನ ದೇಶ' ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಕರೆಯ ಮೇರೆಗೆ ಪುಣ್ಯ ಭೂಮಿಯ ಮಣ್ಣು ಶೇಖರಿಸಿ ದೇಶದ ವೀರ ಯೋಧರ ಅಮೃತ ವಾಟಿಕಾ ವನದಲ್ಲಿ ಅದನ್ನು ಸೇರಿಸುವ ಸಂಕಲ್ಪದ ಪುಣ್ಯ ದಿನವಿದು ಎಂದರು.
ಕೆಂಪೇಗೌಡರ ಪ್ರತಿಮೆ ಅನಾವರಣದ ಸಂದರ್ಭದಲ್ಲೂ ಇಡೀ ರಾಜ್ಯದ ಎಲ್ಲ ಪುಣ್ಯ ಸ್ಥಳಗಳಿಂದ ಮಣ್ಣು ತರಲಾಗಿತ್ತು. ಇವತ್ತು ಇಡೀ ದೇಶದ ಕೆಲಸ ನಡೆದಿದೆ. ದೇಶದ ಪರಂಪರೆ, ಆಚಾರ, ವಿಚಾರಗಳನ್ನು ಕ್ರೋಡೀಕರಿಸುವ ಕಾರ್ಯ ಆಗುತ್ತಿದೆ. ದೇಶ ರಕ್ಷಿಸುವ ಸೈನಿಕರ ವನಕ್ಕೆ ಇಲ್ಲಿಂದ ಕೂಡ ಮಣ್ಣು ಕಳಿಸುವ ಕೆಲಸ ನಡೆಸಲಾಗುತ್ತಿದೆ. ಇದು ಇಡೀ ರಾಜ್ಯದಲ್ಲಿ ಅಕ್ಟೋಬರ್ 30ರ ವರೆಗೆ ನಡೆಯಲಿದೆ ಎಂದರು.
ದೇಶದ ಸಮಸ್ತ ಜನತೆಗೆ ಶ್ರೀಕೃಷ್ಣ ಜಯಂತಿಯ ಶುಭಾಶಯ ಕೋರಿದ ಸದಾನಂದ ಗೌಡರು, ಭಗವದ್ಗೀತೆಗೆ ಪೂರಕ ಕೆಲಸ ಇಲ್ಲಿ ನಡೆಯುತ್ತಿದೆ. ದೇಶಪ್ರೇಮ ಇಮ್ಮಡಿಗೊಳಿಸುವ ಮತ್ತು ದೇಶಕ್ಕೆ ಗೌರವ ಕೊಡುವ ಕಾರ್ಯಕ್ರಮ ಇದಾಗಿದೆ. ಈ ಅದ್ಭುತ ಕಾರ್ಯಕ್ರಮದಲ್ಲಿ ಜನತೆ ಭಾಗವಹಿಸಬೇಕೆಂದು ಅವರು ವಿನಂತಿಸಿದರು. ಭಾರತ ಹೆಸರು ಬದಲಾವಣೆ ಯಾವಾಗಲೋ ಆಗಬೇಕಿತ್ತು. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಭರತ ಭೂಮಿಯಲ್ಲಿ ನಾವು ಸ್ವಾತಂತ್ರ್ಯ ಪಡೆಯುವ ಹೊತ್ತಿನಲ್ಲೇ ಭಾರತ ಎಂಬ ಒಂದೇ ಹೆಸರನ್ನು ಈ ಭೂಮಿಗೆ ಇಡಬೇಕಾಗಿತ್ತು. ವಿದೇಶಿ ಪ್ರೇಮದ ಜನರು ಇದ್ದ ಕಾರಣ ಆ 'ಇಂಡಿಯಾ' ಶಬ್ಧ ಬಂದಿದೆ ಎಂದು ಹೇಳಿದರು.
ಇವತ್ತು ಭಾರತವು ಯಶಸ್ವಿ ದೇಶವಾಗಿದೆ. ದೇಶಕ್ಕೆ ನಮ್ಮ ಮಣ್ಣಿನ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಗಳ ಆಧಾರಿತ ಹೆಸರಿರಬೇಕು. ಗರಿಷ್ಠ ದೇಶಪ್ರೇಮ ಇರುವ ದೇಶ ಅತಿಹೆಚ್ಚು ಅಭಿವೃದ್ಧಿ ಕಾಣುತ್ತದೆ. ಇಸ್ರೇಲ್, ಜಪಾನ್ ಇದಕ್ಕೆ ಉದಾಹರಣೆ ಎಂದು ನುಡಿದರು. ರಾಜಕೀಯ ಕಾರಣಕ್ಕಾಗಿ ಇಂಡಿಯಾ ಹೆಸರಿಗೆ ಪ್ರಾಮುಖ್ಯತೆ ನೀಡಿದ್ದು ದುರ್ದೈವ. ಇವತ್ತಾದರೂ ಒಳ್ಳೆಯ ದಿನ ಬಂದಿದೆ ಎಂದು ತಿಳಿಸಿದರು.