ಬೆಂಗಳೂರು: ಪ್ರಿಯಕರನೊಂದಿಗೆ ಸಂಚು ರೂಪಿಸಿ ಗಂಡನನ್ನು ಉಸಿಗಟ್ಟಿಸಿ ಕೊಂದು ಆತ್ಮಹತ್ಯೆಯ ಕಥೆ ಕಟ್ಟಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕಾಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅನಿತಾ ಹಾಗೂ ಹರೀಶ್ ಬಂಧಿತ ಆರೋಪಿಗಳು. ಆನಂದ್ ಕೊಲೆಯಾದವರು.
ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲು:ಎರಡು ತಿಂಗಳ ಹಿಂದೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರ ಬಾತ್ ರೂಮಿನಲ್ಲಿ ಚಾಕುವಿನಿಂದ ಕೈ ಕೊಯ್ದುಕೊಂಡ ಸ್ಥಿತಿಯಲ್ಲಿ ಆನಂದ್ ಅವರ ಶವ ಪತ್ತೆಯಾಗಿತ್ತು. ಶವವನ್ನ ಪರಿಶೀಲಿಸಿದ್ದ ಕಾಡುಗೋಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಆನಂದ್ ಅವರಿಗೆ ನಿದ್ರೆ ಮಾತ್ರೆ ನೀಡಿ ಬಳಿಕ ಉಸಿರುಗಟ್ಟಿಸಿ ಕೊಲೆಗೈದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಪತ್ನಿಯನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯಾಂಶ ಬಯಲಾಗಿದೆ.
2 ತಿಂಗಳ ಬಳಿಕ ಆರೋಪಿಗಳು ಸೆರೆ :ಪ್ರಿಯಕರ ಹರೀಶ್ ಜತೆ ಜೀವನ ಮಾಡಲು ಇಚ್ಚಿಸಿದ್ದ ಅನಿತಾ ಆತನೊಂದಿಗೆ ಸೇರಿ ಗಂಡ ಆನಂದ್ ನ ಹತ್ಯೆಗೆ ಸಂಚು ರೂಪಿಸಿದ್ದಳಂತೆ. ಅದರಂತೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಆನಂದ್ ನಿದ್ರೆಗೆ ಜಾರುವಂತೆ ನೋಡಿಕೊಂಡಿದ್ದಳು. ಬಳಿಕ ಇಬ್ಬರೂ ಸೇರಿ ರೈಲ್ವೆ ಹಳಿ ಮೇಲೆ ಆನಂದ್ ದೇಹ ಇರಿಸುವ ಸಂಚು ರೂಪಿಸಿದ್ದರು. ಆದರೆ ಆತ ಹೆಚ್ಚು ತೂಕವಿದ್ದ ಕಾರಣ ಆತನನ್ನ ಸಾಗಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮನೆಯಲ್ಲಿಯೇ ಉಸಿರುಗಟ್ಟಿಸಿ ಆತನನ್ನ ಹತ್ಯೆಗೈದಿದ್ದರು. ಬಳಿಕ ಮೃತದೇಹವನ್ನ ಬಾತ್ ರೂಮಿನಲ್ಲಿರಿಸಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದಂತೆ ಬಿಂಬಿಸಿದ್ದರು. ಕಾಡುಗೋಡಿ ಪೊಲೀಸರ ವಿಚಾರಣೆಯಲ್ಲಿ ಅಸಲಿ ಸತ್ಯ ಬಯಲಾಗಿದ್ದು, 2 ತಿಂಗಳ ಬಳಿಕ ಇಬ್ಬರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.