ಬೆಂಗಳೂರು:ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಸಂಪುಟ ಸೇರಲು ನೂತನ ಶಾಸಕ ಮುನಿರತ್ನ ತುದಿಗಾಲಲ್ಲಿ ನಿಂತಿದ್ದು, ಸಿಎಂ ಸೇರಿದಂತೆ ಆಪ್ತರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ತಂಡದ ಟೀಂ ಲೀಡರ್ನಂತಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆರ್.ಆರ್ ನಗರ ಕ್ಷೇತ್ರದ ನೂತನ ಶಾಸಕ ಮುನಿರತ್ನ ಭೇಟಿ ನೀಡಿದರು. ಸದಾಶಿವನಗರದಲ್ಲಿರುವ ನಿವಾಸದಲ್ಲಿ ಕೆಲಕಾಲ ಮಾತುಕತೆ ನಡೆಸಿದರು.
ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ ನೂತನ ಶಾಸಕ ಮುನಿರತ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರಿಗೆಲ್ಲ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಲಾಗಿದೆ. ಅದೇ ರೀತಿ ನನಗೂ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಸಿಎಂ ಜೊತೆ ಮಾತುಕತೆ ನಡೆಸುವಂತೆ ಬೆಳಗಾವಿ ಸಾಹುಕಾರ ಎಂದೇ ಕರೆಸಿಕೊಳ್ಳುವ ಸಿಎಂ ಸಂಪುಟದ ಪ್ರಭಾವಿ ಸಚಿವ ಜಾರಕಿಹೊಳಿಗೆ ಮುನಿರತ್ನ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪುವುದಿಲ್ಲ, ನಮ್ಮನ್ನೆಲ್ಲ ಸಂಪುಟಕ್ಕೆ ತೆಗೆದುಕೊಂಡಿದ್ದಾರೆ. ಅದೇ ರೀತಿ, ಸಂಪುಟ ವಿಸ್ತರಣೆ ವೇಳೆ ನಿಮಗೂ ಅವಕಾಶ ನೀಡಲಿದ್ದಾರೆ. ಈ ವಿಷಯವನ್ನು ಸಿಎಂ ಗಮನಕ್ಕೆ ತರುತ್ತೇನೆ ಎಂದು ಮುನಿರತ್ನಗೆ ಜಾರಕಿಹೊಳಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ, ಜಾರಕಿಹೊಳಿ ಭೇಟಿ ವೇಳೆ ಯಾವುದೇ ರೀತಿಯ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಮುನಿರತ್ನ ತಿಳಿಸಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕನಾದ ಹಿನ್ನೆಲೆಯಲ್ಲಿ ಸಹಕಾರ ನೀಡಿದ ಜಾರಕಿಹೊಳಿಯವರನ್ನು ಅಭಿನಂದನೆ ಸಲ್ಲಿಸಲು ಬಂದಿದ್ದೆ ಎಂದಷ್ಟೆ ಚುಟುಕು ಹೇಳಿಕೆ ನೀಡಿದ್ದಾರೆ.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನಿವಾಸಕ್ಕೆ ಭೇಟಿ ನೀಡಿದ ಮುನಿರತ್ನ ನಂತರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನಿವಾಸಕ್ಕೆ ಭೇಟಿ ನೀಡಿದ ಮುನಿರತ್ನ ವಿಶ್ವನಾಥ್ ಅವರನ್ನು ಅಭಿನಂದಿಸಿದರು. ಕೆಲಕಾಲ ಮಾತುಕತೆ ನಡೆಸಿದರು. ಫಲಿತಾಂಶ ಬರುತ್ತಿದ್ದಂತೆ ನೇರವಾಗಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಧನ್ಯವಾದ ಸಲ್ಲಿಸಿ ಆಶೀರ್ವಾದ ಪಡೆದುಕೊಂಡು ಬಂದಿದ್ದ ಮುನಿರತ್ನ, ನಂತರ ನಿರಂತರವಾಗಿ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಅದರ ಜೊತೆ ಜೊತೆಯಲ್ಲೇ ಸಚಿವ ಸ್ಥಾನಕ್ಕೂ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.