ಬೆಂಗಳೂರು : ಆರ್. ಆರ್ ನಗರ ಕ್ಷೇತ್ರ ದಕ್ಕಿಸಿಕೊಳ್ಳಲು ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನನ್ನ ವಿರುದ್ಧ ವೇಲು ನಾಯ್ಕರ್ ಮೂಲಕ ಆರೋಪ ಮಾಡಿಸಲಾಗುತ್ತಿದೆ ಎಂದು ಶಾಸಕ ಮುನಿರತ್ನ ಆರೋಪಿಸಿದ್ದಾರೆ. ಹನಿಟ್ರ್ಯಾಪ್ ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ಮುನಿರತ್ನ, ’’ಹಿಂದೆ ನನ್ನ ಜೊತೆ ಇದ್ದವರು ಈಗ ಕಾಂಗ್ರೆಸ್ ಸೇರಿ ನನ್ನ ಮೇಲೆ ಗಂಭೀರ ಆರೋಪ ಮಾಡುತ್ತಿದ್ದಾರೆ. ಆದರೆ, ಆರೋಪ ಮಾಡುತ್ತಿರುವುದಕ್ಕಿಂತ ಮಾಡಿಸುತ್ತಿದ್ದಾರೆ ಎನ್ನಬಹುದು. ಆರ್ ಆರ್ ನಗರ ಕ್ಷೇತ್ರವನ್ನು ಖಾಲಿ ಮಾಡಿಸಬೇಕು ಮತ್ತು ಅವರ ಕಡೆಯವರನ್ನು ಅಲ್ಲಿ ನಿಲ್ಲಿಸಬೇಕು ಎನ್ನುವುದು ಇದರ ಹಿಂದಿನ ಷಡ್ಯಂತ್ರ‘‘ ಎಂದು ಅವರು ಆರೋಪಿಸಿದ್ದಾರೆ.
ಇದು ಅವರ ಮಾತಲ್ಲ, ಹೇಳಿಸಿದ ಮಾತುಗಳು: ’’ವಿಧಾನಸಭಾ ಚುನಾವಣೆಗೂ ಮೊದಲೇ ಅವರು ಪಕ್ಷ ಬಿಟ್ಟು ಹೋಗಬಹುದಿತ್ತಲ್ಲ?. ಈಗ ಯಾಕೆ ಹೋಗಿದ್ದಾರೆ? ನನ್ನನ್ನು ಶಾಸಕನನ್ನಾಗಿ ಮಾಡಿದ ನಂತರ ಈಗ ಹೋಗಿದ್ದಾರೆ ಎಂದರೆ ಇದರಲ್ಲಿ ರಾಜಕೀಯ ಇರಲೇಬೇಕಲ್ಲ. ಚುನಾವಣೆಗೂ ಮೊದಲು ನನ್ನ ಬಳಿಯೇ ಕುಳಿತು ಇವರು ಎರಡು ವರ್ಷ ಮಾತನಾಡಿದ್ದಾರೆ. ಆ ರೀತಿ ಮಾತನಾಡಬೇಡಿ ಎಂದು ನಾನೇ ಅವರಿಗೆ ಬೈದು ಬುದ್ದಿ ಹೇಳಿದ್ದೆ. ರಾಜಕೀಯವನ್ನ ರಾಜಕೀಯವಾಗಿ ಮಾಡಬೇಕು. ವೈಯಕ್ತಿಕ ವಿಷಯಗಳನ್ನು ಮಾತನಾಡಬಾರದು ಎಂದು ನಾನೇ ತಾಕೀತು ಮಾಡಿದ್ದೆ. ಕೇವಲ ಒಂದು ತಿಂಗಳ ಹಿಂದಷ್ಟೇ ನನ್ನ ಜೊತೆಗೆ ಮಾತುಕತೆ ನಡೆಸಿ, ವಿರೋಧಿಗಳನ್ನು ಸೋಲಿಸಬೇಕು ಎಂದು ಹೇಳಿದ್ದರು. ಅಂತಹವರು ಈಗ ಈ ರೀತಿ ಹೇಳುತ್ತಿದ್ದಾರೆ. ಇದು ಅವರ ಮಾತಲ್ಲ, ಹೇಳಿಸಿದ ಮಾತುಗಳು‘‘ ಎಂದು ಮುನಿರತ್ನ ಹೇಳಿದ್ದಾರೆ
’’ನನ್ನ ವಿರುದ್ಧ ಮಾತನಾಡಿದ್ದಾಯಿತು. ಆದರೆ ಬೇರೆಯವರ ಬಗ್ಗೆ ಮಾತನಾಡದಿದ್ದರೆ ಸಾಕು, ನನ್ನ ಬಳಿ ಎರಡು ವರ್ಷದಿಂದ ಅವರಿಬ್ಬರ ಬಗ್ಗೆ ಮಾತನಾಡಿದ್ದಾರೆ. ಇನ್ನು ಮುಂದಾದರೂ ಅವರು ಹಾಗೆಲ್ಲ ಮಾತನಾಡದೇ ಇದ್ದರೆ ಸಾಕು. ಆ ಪಕ್ಷದಲ್ಲಿಯಾದರೂ ಅವರು ಗೌರವವಾಗಿ ಇರಲಿ. ಅವರಿಬ್ಬರ ಬಗ್ಗೆ ಮಾತನಾಡುವುದು ಬೇಡ‘‘ ಎಂದು ವೇಲು ನಾಯ್ಕರ್ಗೆ ಟಕ್ಕರ್ ನೀಡಿದರು.