ಬೆಂಗಳೂರು: ಪುರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪ್ರತ್ಯೇಕವಾಗಿ ಪರಿವರ್ತನೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಉದ್ಯಮಿ ಶ್ರೀಶೈಲ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಸೆಕ್ಷನ್ 95 ರಿಂದ 97ಗಳ ಪ್ರಕಾರ ಪುರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಜಮೀನುಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಒಳಪಡಲಿದೆ ಎಂದು ಹೇಳಲಾಗಿದೆ. ಆದ ಕಾರಣ ಈ ವ್ಯಾಪ್ತಿಯ ಭೂಮಿಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪ್ರತ್ಯೇಕವಾಗಿ ಪರಿವರ್ತನೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಪೀಠ ತಿಳಿಸಿದೆ. ಅಲ್ಲದೇ, ಉದ್ದೇಶಿತ ಭೂಮಿ ಪುರಸಭೆ ವ್ಯಾಪ್ತಿಯಲ್ಲಿದೆ. ಈ ಭೂಮಿಗೆ ಕರ್ನಾಟಕ ಭೂ ಕಂದಾಯ ಕಾಯಿದೆಯ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಸಹ ಪೀಠ ತಿಳಿಸಿದೆ.
ಕೃಷಿಯೇತರ ಉದ್ದೇಶಕ್ಕಾಗಿ(ಪೆಟ್ರೋಲ್ ಬಂಕ್ ನಿರ್ಮಾಣಕ್ಕಾಗಿ) ಪರಿವರ್ತಿಸಲಾದ ಭೂಮಿಯು ಕೃಷಿಯೇತರ ವಾಣಿಜ್ಯ ಬಳಕೆಯ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಪೆಟ್ರೋಲ್ ಬಂಕ್‌ಗಾಗಿ ಭೂಮಿಯನ್ನು ಪರಿವರ್ತಿಸಿ ಜಿಲ್ಲಾಧಿಕಾರಿಗಳ ಆದೇಶಿಸಿದ್ದಾರೆ. ಆದರೆ, ವಾಣಿಜ್ಯ ಕಟ್ಟಡ ಹಾಗೂ ಪೆಟ್ರೋಲ್ ಬಂಕ್ ನಿರ್ಮಾಣ ವಿಚಾರವಾಗಿ ಪರಿವರ್ತಿತ ಭೂಮಿಯನ್ನು ಪ್ರತ್ಯೇಕಿಸಿ ನೋಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.
ಜತೆಗೆ, ಪ್ರಸ್ತುತ ಪರಿವರ್ತಿತ ಭೂಮಿಯಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸಿರುವುದರಿಂದ, ಇತರ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುವುದಕ್ಕೆ ಅವಕಾಶ ನಿರ್ಬಂಧಿಸುವಂತಿಲ್ಲ. ಒಂದು ವೇಳೆ ಆ ರೀತಿಯಲ್ಲಿ ನಿರ್ಬಂಧ ವಿಧಿಸಿದಲ್ಲಿ ಪೆಟ್ರೋಲ್ ಬಂಕ್‌ಗೆ ನೀಡಿದ ಅನುಮತಿ ಕಾನೂನು ಬಾಹಿರವಾಗಲಿದೆ. ಆದ್ದಿಂದ ಮುಂದಿನ 60 ದಿನಗಳಲ್ಲಿ ಅರ್ಜಿದಾರರ ಆಸ್ತಿಗೆ ಸಂಬಂಧಿಸಿದಂತೆ ನಿಯಮಗಳ ಅನುಸಾರ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವಂತೆ ನ್ಯಾಯಪೀಠ ಪುರಸಭೆಗೆ ಸೂಚನೆ ನೀಡಿದೆ.