ಬೆಂಗಳೂರು:ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರ ಹಿಂದೆ ಸಿದ್ದರಾಮಯ್ಯ ಪಾತ್ರ ಇತ್ತು ಎಂದು ಮನೆ ದೇವರ ಮೇಲೆ ಸುಧಾಕರ್ ಪ್ರಮಾಣ ಮಾಡಲು ಸಿದ್ಧರಿದ್ದಾರಾ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದು ಬಾಂಬೆ ಟೀಂ ನಲ್ಲಿ ಬಿರುಕುಂಟಾಗಿದೆ ಎನ್ನುವುದಕ್ಕೆ ನಿದರ್ಶನ ಎನ್ನಬಹುದಾಗಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಎಂಟಿಬಿ ನಾಗರಾಜ್, ಸಿದ್ದರಾಮಯ್ಯ ಅವರನ್ನು ನಾನು ಕೂಡ ಹಲವಾರು ಬಾರಿ ಭೇಟಿ ಮಾಡಿ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಹಾಗೂ ನಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಏನು ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಹೇಳಿಕೊಂಡಾಗ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ ಎಂದು ಹೇಳಿದ್ದರು ಇದು ಸತ್ಯ. ಆದರೆ ಮಾಜಿ ಸಚಿವರಾದ ಸುಧಾಕರ್ ಅವರು ಇಂದು ಸಿದ್ದರಾಮಯ್ಯನವರ ಬಗ್ಗೆ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ಮಾತುಗಳು ಸತ್ಯಕ್ಕೆ ದೂರವಾಗಿವೆ. ಸುಧಾಕರ್ ಅವರು ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಈ ಮಾತುಗಳನ್ನು ಹೇಳಿದ್ದಾರೆ. ಹಾಗಾದರೆ, ಇಷ್ಟು ದಿನ ಏಕೆ ಸುಮ್ಮನಿದ್ದರು? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸೇರಲು ಸಿದ್ದರಾಮಯ್ಯರವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇತ್ತೆಂದು ಸುಧಾಕರ್ ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುವರೆ?. ಇಷ್ಟು ದಿನ ಮೌನವಾಗಿದ್ದು? ಈಗ ಇದರ ಪ್ರಸ್ತಾಪದ ಮರ್ಮವಾದರೂ ಏನು? ಎಂದು ಎಂಟಿಬಿ ನಾಗರಾಜ ಅವರು ಪ್ರಶ್ನಿಸಿದ್ದಾರೆ. ಇಂದು ಬೆಳಗ್ಗೆಯಷ್ಟೇ ಸುಧಾಕರ್ ಹಾಗು ಎಸ್.ಟಿ ಸೋಮಶೇಖರ್ ಮೈತ್ರಿ ಸರ್ಕಾರ ಪತನಕ್ಕೆ ಹಾಗು ನಾವು ಬಿಜೆಪಿ ಸೇರಲು ಸಿದ್ದರಾಮಯ್ಯ ಕಾರಣ ಎಂದಿದ್ದರು. ಇದಕ್ಕೆ ಅವರ ಜೊತೆಯಲ್ಲೇ ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಸಂಪುಟ ಸಹೋದ್ಯೋಗಿಯೂ ಆಗಿದ್ದ ಎಂಟಿಬಿ ನಾಗರಾಜ್ ಅವರು ಟಾಂಗ್ ನೀಡಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.