ಬೆಂಗಳೂರು :ನಿನ್ನೆ ರಾತ್ರಿ 9.50ಕ್ಕೆ ಭೂಕಂಪನ ಆಗಿದೆ. ಜನ ನಮ್ಮನ್ನು ಸಂಪರ್ಕಿಸಿದರು. ಭೂಕಂಪನ ಪ್ರದೇಶಗಳಿಗೆ ಡಿಸಿ ಹೋಗಿ ಪರಿಶೀಲಿಸಿದ್ದಾರೆ. ಜನರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಸಿಎಂ ಬೊಮ್ಮಾಯಿ ಅವರ ಜತೆ ಚರ್ಚೆ ಮಾಡಿದ್ದೇವೆ ಎಂದು ಸಂಸದ ಉಮೇಶ್ ಜಾಧವ್ ಹೇಳಿದರು.
ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಮೂರ್ನಾಲ್ಕು ವರ್ಷಗಳಲ್ಲೇ ನಿನ್ನೆ ಅತ್ಯಧಿಕ ಪ್ರಮಾಣದ ಭೂಕಂಪನ ಆಗಿದೆ. ನಿನ್ನೆ ರಿಕ್ಟರ್ ಮಾಪಕದಲ್ಲಿ 4.0 ಪ್ರಮಾಣ ತೋರಿಸಿದೆ. ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಭೂಕಂಪನ ಹೆಚ್ಚಾದರೆ ಪುನರ್ವಸತಿ ವ್ಯವಸ್ಥೆ ಸಿದ್ಧವಿದೆ. ಜಿಲ್ಲಾಡಳಿತ ಎಲ್ಲ ತಯಾರಿ ಮಾಡಿಕೊಂಡಿದೆ ಎಂದರು.
ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಮಾತನಾಡಿ, ಕಲ್ಬುರ್ಗಿಯಲ್ಲಿ ಲಘು ಭೂಕಂಪನಗಳಾಗುತ್ತಿವೆ. ಜನ ಭಯಭೀತರಾಗಿದ್ದಾರೆ. ಜನರ ಜತೆ ಸರ್ಕಾರ ಇದೆ. ನಾನು ಮತ್ತು ಸಂಸದರು ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ. ಸಿಎಂ, ಜಿಲ್ಲಾ ಉಸ್ತುವಾರಿ ನಿರಾಣಿಯವರ ಜತೆ ಚರ್ಚೆ ಮಾಡಿದ್ದೇವೆ.
ಅಕ್ಟೋಬರ್ 16ರಂದು ಒಂದು ಇಡೀ ದಿನ ನಾವು ವಾಸ್ತವ್ಯ ಮಾಡುತ್ತೇವೆ. ಉಮೇಶ್ ಜಾಧವ್ ಅವರ ಜತೆ ನಾನು ಚಿಂಚೋಳಿಯಲ್ಲಿ ವಾಸ್ತವ್ಯ ಮಾಡುತ್ತೇನೆ. ನಾಲ್ಕಾರು ತಂಡಗಳನ್ನು ದೆಹಲಿಯಿಂದ ಭೂಕಂಪನ ಪ್ರದೇಶಗಳಿಗೆ ಕಳಿಸುವ ವ್ಯವಸ್ಥೆ ಮಾಡಿದ್ದೇವೆ ಎಂದರು.
ಭೂವಿಜ್ಞಾನಿಗಳು ಒಂದು ವರದಿ ಕೊಟ್ಟಿದ್ದಾರೆ. ಅಲ್ಲಿ ಸುಣ್ಣದ ನಿಕ್ಷೇಪ ಹೆಚ್ಚಾಗಿರೋದ್ರಿಂದ ಮಳೆಗಾಲದ ವೇಳೆ ಈ ರೀತಿ ಸದ್ದು, ಸಣ್ಣ ಕಂಪನಗಳು ಆಗುತ್ತವೆ. ಯಾವುದೇ ದೊಡ್ಡ ಹಾನಿ ಆಗಲ್ಲ ಎಂದು ವರದಿಯಲ್ಲಿ ಉಲ್ಲೇಖ ಮಾಡಿದೆ. ಜನರಿಗಾಗಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಾಣ ಮಾಡಲು ಸಿಎಂಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
7 ದಶಕ ಕಾಲ ಕಾಂಗ್ರೆಸ್‌ಗೆ ದಲಿತರು ವೋಟ್ ಬ್ಯಾಂಕ್ : ನಾರಾಯಣಸ್ವಾಮಿ
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರದಲ್ಲಿದೆಯೋ ಅಲ್ಲಿ ದಲಿತರ ಮೇಲೆ ಹಲ್ಲೆ, ಅತ್ಯಾಚಾರಗಳಾದರೆ ಅವರು ಬಾಯಿ ಬಿಡಲ್ಲ. ಆದರೆ, ಕಾಂಗ್ರೆಸೇತರ ರಾಜ್ಯಗಳಲ್ಲಿ ಘಟನೆಗಳಾದರೆ ಮಾತ್ರ ಆ ಬಗ್ಗೆ ಕಾಂಗ್ರೆಸ್ ನಾಯಕರು ಮಾತಾಡ್ತಾರೆ ಎಂದು ಕಿಡಿಕಾರಿದರು.
ಸುಮಾರು ಏಳು ದಶಕಗಳ ಕಾಲ ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿತ್ತು. ಆದರೆ, ಕಾಂಗ್ರೆಸ್ ದಲಿತ ಸಬಲೀಕರಣ ಮಾಡಲಿಲ್ಲ. ರಾಜಸ್ಥಾನದಲ್ಲಿ ದಲಿತರ ವಿರುದ್ಧ 80 ಸಾವಿರ ಪ್ರಕರಣಗಳಲ್ಲಿ ಅನ್ಯಾಯ, ದೌರ್ಜನ್ಯ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ ಹಾಕಿದವರ ಮನೆಗಳಿಗೆ ನುಗ್ಗಿ ದೌರ್ಜನ್ಯ ಮಾಡಲಾಗಿದೆ. ರಾಹುಲ್ ಗಾಂಧಿ ಮಾತು ಮಾತಿಗೆ ಟ್ವೀಟ್ ಮಾಡ್ತಾರೆ. ಆದ್ರೆ, ರಾಜಸ್ಥಾನ ದಲಿತರ ವಿರುದ್ಧದ ದೌರ್ಜನ್ಯ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತಾಡಲ್ಲ ಎಂದು ಪ್ರಶ್ನಿಸಿದರು.
ಅಧ್ಯಕ್ಷರನ್ನು ಹುಡುಕುವ ಯೋಗ್ಯತೆ ಇಲ್ಲ: ಕಾಂಗ್ರೆಸ್‌ನವರು ತಮ್ಮ ಪಕ್ಷಕ್ಕೆ ಅಧ್ಯಕ್ಷರ ಹುಡುಕಾಟಕ್ಕೆ ಮುಂದಾಗಿದಾರೆ. ಕಾಂಗ್ರೆಸ್ ಅಧ್ಯಕ್ಷರು ಯಾರು? ರಾಹುಲ್ ಗಾಂಧಿ ನಾ? ಇಲ್ಲಾ ಪ್ರಿಯಾಂಕಾ ಗಾಂಧಿ? ಅಥವಾ ಸೋನಿಯಾ ಗಾಂಧಿ ನಾ?. ಒಬ್ಬ ಅಧ್ಯಕ್ಷರನ್ನು ಹುಡುಕಿಕೊಳ್ಳುವ ಯೋಗ್ಯತೆ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ವ್ಯಂಗ್ಯವಾಡಿದರು
ಗೋಸುಂಬೆ ರಾಜಕಾರಣ :ಲಖೀಂಪುರ ಖೇರಿ ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ದೆಹಲಿ ಹೊರಗೆ ಪ್ರತಿಭಟನೆ ಮಾಡ್ತಿರುವ ರೈತರ ಮೇಲೆ ಕಾಂಗ್ರೆಸ್ ಅನುಕಂಪ ತೋರುತ್ತೆ. ಆದ್ರೆ, ರಾಜಸ್ಥಾನದಲ್ಲಿ ರೈತರ ಮೇಲೆ ಲಾಠಿ ಬೀಸಲಾಯ್ತು. ಯಾಕೆ ಅವರು ರೈತರಲ್ವಾ? ಇದು ಕಾಂಗ್ರೆಸ್ನ ದ್ವಂದ್ವ ನೀತಿ. ಅವರು ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ದಲಿತರ ಬಗ್ಗೆ ಮಾತನಾಡಲು ಅಧಿಕಾರ ಇಲ್ಲ : ಶಾಸಕ ರಾಜಕುಮಾರ್
ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಮಾತನಾಡಿ, ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗಿದೆ. ಎಲ್ಲರ ವಿಶ್ವಾಸ ಕಳ್ಕೊಂಡಿದೆ. ಮತ್ತೆ ಅಧಿಕಾರಕ್ಕೆ ಬರಲು ಡೋಂಗಿತನ ಪ್ರದರ್ಶಿಸುತ್ತಿದೆ. ಉತ್ತರಪ್ರದೇಶ ಕೇಂದ್ರಿತ ರಾಜಕಾರಣ ಮಾಡುತ್ತಿದೆ. ದೇಶದ ರೈತರನ್ನು, ದಲಿತರನ್ನು ದಾರಿತಪ್ಪಿಸ್ತಿದೆ. ಕಾಂಗ್ರೆಸ್‌ಗೆ ದಲಿತರ ಬಗ್ಗೆ ಮಾತಾಡಲು ಅಧಿಕಾರ ಇಲ್ಲ. ಇಲ್ಲಸಲ್ಲದ ವಿಚಾರಗಳಿಗೆ ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂದರು.